ಮದುರೈ: ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಧಿರಿಸಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳು ನಾಡಿನ ಖ್ಯಾತ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಿರುವ ಫೋಟೋ ಎಲ್ಲೆಲ್ಲೂ ಹರಿದಾಡುತ್ತಿದೆ.
ಮದುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮೋದಿಯವರು ನಿನ್ನೆ ರಾತ್ರಿ 8.30ರ ಸುಮಾರಿಗೆ ನೇರವಾಗಿ ದೇವಸ್ಥಾನಕ್ಕೆ ಧೋತಿ ಮತ್ತು ಶರ್ಟ್ ನಲ್ಲಿ ಹೋದರು.
ದೇವಸ್ಥಾನದ ಅಮ್ಮನ್ ಸನ್ನಿಧಿ ಮೂಲಕ ಪ್ರವೇಶಿಸಿದ ಮೋದಿಯವರನ್ನು ದೇವಸ್ಥಾನದ ಅಧಿಕಾರಿಗಳು, ಅರ್ಚಕರು, ಪರಿವಾರದವರು ಪೂರ್ಣ ಕುಂಭ ಸ್ವಾಗತ ಕೋರಿದರು. ನಂತರ ಪ್ರಧಾನಿ, ದೇವಸ್ಥಾನದ ಜಂಟಿ ಆಯುಕ್ತ ಚೆಲ್ಲದುರೈ ಮತ್ತು ಟಿ ಕಣ್ಣನ್ ಅವರೊಂದಿಗೆ ದೇವಸ್ಥಾನದ ಒಳಗೆ ಹೋದರು.
ದೇವಸ್ಥಾನದ ಒಳಗಿರುವ ಸಿದ್ದಿ ವಿನಯಗರ ಮತ್ತು ಮುಕ್ಕುರಾಣಿ ವಿನಯಗರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮೀನಾಕ್ಷಿ ದೇವರ ಗರ್ಭಗುಡಿಗೆ ಹೋಗಿ ಸುಂದರೇಶ್ವರ ಸನ್ನಿಧಿಗೆ ಸಹ ಭೇಟಿ ನೀಡಿದರು.
ದೇವಸ್ಥಾನದಲ್ಲಿ ಒಟ್ಟಾರೆ 45 ನಿಮಿಷ ಕಳೆದ ಮೋದಿಯವರು ದೇವಸ್ಥಾನದ ಕೊಳಕ್ಕೆ ಸಹ ಭೇಟಿ ನೀಡಿ ವೀಕ್ಷಿಸಿದರು. ದೇವಸ್ಥಾನದ ಹಿನ್ನೆಲೆ, ಇತಿಹಾಸವನ್ನು ಕೇಳಿ ತಿಳಿದುಕೊಂಡರು. ಪ್ರಧಾನಿಯವರಿಗೆ ಪ್ರಸಾದವಾಗಿ ವಿಭೂತಿ, ಕುಂಕುಮ ನೀಡಲಾಯಿತು.
ನಂತರ ಮೋದಿಯವರು ಭೇಟಿಗಾರರ ಪುಸ್ತಕದಲ್ಲಿ ತಮಿಳು ನಾಡಿನ ಮತ್ತು ಮದುರೈಯ ಪ್ರಾಮುಖ್ಯತೆ ಬಗ್ಗೆ ಬರೆದರು. ಪ್ರಧಾನಿಯಾದ ಬಳಿಕ ಮೋದಿಯವರ ಮೊದಲ ಭೇಟಿ ಇದಾಗಿದೆ. ಈ ಹಿಂದೆ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭೇಟಿ ನೀಡಿದ್ದರು.
ಜವಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ನಂತರ ಮದುರೈ ದೇವಸ್ಥಾನಕ್ಕೆ ಭೇಟಿ ನೀಡಿದ ಮೂರನೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ ತೀವ್ರ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.