ನವದೆಹಲಿ: ದೇಶದಲ್ಲಿ ಶೇ 75ಕ್ಕಿಂತ ಹೆಚ್ಚು ಮಳೆಯನ್ನು ಸುರಿಸುವ ನೈರುತ್ಯ ಮುಂಗಾರು ಮಾರುತವು ಈ ವರ್ಷ ಸಾಮಾನ್ಯವಾಗಿರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.
'ಈ ಬಾರಿ ಮಳೆಯ ದೀರ್ಘಾವಧಿ ಸರಾಸರಿ ಪ್ರಮಾಣ (ಲಾಂಗ್ ಪೀರಿಯಡ್ ಆವರೇಜ್-ಎಲ್‌ಪಿಎ) ಶೇ 98ರಷ್ಟು ಇರಲಿದೆ, ಇದರಲ್ಲಿ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು' ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ತಿಳಿಸಿದ್ದಾರೆ.
ಜೂನ್ ತಿಂಗಳಿನಲ್ಲಿ ಕೇರಳ ಕರಾವಳಿಯ ಮೂಲಕ ಭಾರತವನ್ನು ಪ್ರವೇಶಿಸುವ ನೈರುತ್ಯ ಮಾರುತ, ಸೆಪ್ಟೆಂಬರ್ ಅಂತ್ಯದವರೆಗೆ ನಾಲ್ಕು ತಿಂಗಳ ಕಾಲ ಮುಂಗಾರು ಮಳೆಯನ್ನು ತರುತ್ತದೆ. ನಾಲ್ಕು ತಿಂಗಳ ಮಳೆಯ ಪ್ರಮಾಣದ ಮೊದಲ ಮುನ್ಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
'ಮುಂಗಾರು ದೀರ್ಘಾವಧಿ ಸರಾಸರಿಯ ಶೇ 98ರಷ್ಟು ಇರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ. ಇದು ದೇಶಕ್ಕೆ ಒಳ್ಳೆಯ ವಿಚಾರವಾಗಿದೆ, ಇದು ಭಾರತದಲ್ಲಿ ಉತ್ತಮ ಕೃಷಿ ಇಳುವರಿ ಪಡೆಯಲು ಸಹಕಾರಿಯಾಗಲಿದೆ' ಎಂದು ರಾಜೀವನ್ ಹೇಳಿದ್ದಾರೆ.