ನವದಹೆಲಿ: ವೈದ್ಯಕೀಯ ಆಮ್ಲಜನಕವನ್ನು ವ್ಯರ್ಥ ಮಾಡದೆ ತರ್ಕಬದ್ಧವಾಗಿ ಬಳಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ದೇಶದಲ್ಲಿ ಆಮ್ಲಜನಕದ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ. ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಆಮ್ಲಜನಕ ಅಗತ್ಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಜಿಲ್ಲೆಗಳಿಗೆ ಸುಗಮವಾಗಿ ಆಮ್ಲಜನಕ ಪೂರೈಸಲು ಅನುಕೂಲವಾಗುವಂತೆ 'ನಿಯಂತ್ರಣಾ ಕೊಠಡಿ'ಗಳನ್ನು ಸ್ಥಾಪಿಸಬೇಕು. ಸಿಲಿಂಡರ್‌ಗಳ ಅಗತ್ಯವನ್ನು ಪ್ರತಿನಿತ್ಯ ಪರಿಶೀಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಪ್ರತಿ ದಿನ 7127 ಮೆಟ್ರಿಕ್ ಟನ್‌ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಇದೆ. ಕಳೆದ ಎರಡು ದಿನಗಳಿಂದ ಶೇಕಡ 100ರಷ್ಟು ಉತ್ಪಾದನೆಯಾಗುತ್ತಿದೆ. ಜತೆಗೆ, ಅಗತ್ಯಕ್ಕೆ ತಕ್ಕಂತೆ ಉಕ್ಕು ಕಾರ್ಖಾನೆಗಳಿಂದಲೂ ಹೆಚ್ಚುವರಿಯಾಗಿ ಆಮ್ಲಜನಕ ಲಭ್ಯವಾಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಏಪ್ರಿಲ್ 12ರಂದು ದೇಶದಲ್ಲಿ 3842 ಮೆಟ್ರಿಕ್ ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕ ಬಳಕೆ ಮಾಡಲಾಗಿತ್ತು. ಅಂದರೆ, ಪ್ರತಿ ದಿನ ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಶೇಕಡ 50ರಷ್ಟು ಬಳಕೆ ಮಾಡಲಾಗಿತ್ತು ಎಂದು ವಿವರಿಸಿದೆ.
ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ ತಮಿಳುನಾಡು, ದೆಹಲಿ, ಛತ್ತೀಸಗಡ, ಪಂಜಾಬ್, ರಾಜಸ್ಥಾನದಲ್ಲಿ ಅತಿ ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಕೆಯಾಗುತ್ತಿದೆ. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ವೈದ್ಯಕೀಯ ಆಮ್ಲಜನಕದ ಸಂಗ್ರಹ ಮಾಡಿಕೊಳ್ಳುವುದು ಅಗತ್ಯವಾಗಿದೆ. ದೇಶದಲ್ಲಿ ಈಗ ತಯಾರಿಕಾ ಘಟಕಗಳಲ್ಲಿರುವ ಕೈಗಾರಿಕಾ ಆಮ್ಲಜನಕವು ಸೇರಿದಂತೆ ಒಟ್ಟಾರೆಯಾಗಿ 50 ಸಾವಿರ ಮೆಟ್ರಿಕ್ ಟನ್ ಆಮ್ಲಜನಕ ಸಂಗ್ರಹವಿದೆ ಎಂದು ತಿಳಿಸಿದೆ.
ಅತಿ ಹೆಚ್ಚು ಅಗತ್ಯವಿರುವ ರಾಜ್ಯಗಳಿಗೆ ಸಕಾಲಕ್ಕೆ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಕೈಗಾರಿಕೆ ಇಲಾಖೆ, ಆರೋಗ್ಯ ಸಚಿವಾಲಯ, ಉಕ್ಕು ಸಚಿವಾಲಯದ ಅಧಿಕಾರಿಗಳು ಹಾಗೂ ಆಮ್ಲಜನಕ ಉತ್ಪಾದನೆಯಲ್ಲಿ ತೊಡಗಿರುವ ಪ್ರತಿನಿಧಿಗಳು ಮತ್ತು ಅಖಿಲ ಭಾರತ ಅನಿಲ ತಯಾರಕರ ಸಂಘಟನೆ ಪ್ರತಿನಿಧಿಗಳು, ಪೆಟ್ರೊಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದೆ.
ವೈದ್ಯಕೀಯ ಆಮ್ಲಜನಕ ಪೂರೈಕೆ ಸೇರಿದಂತೆ ಅಗತ್ಯ ಇರುವ ವೈದ್ಯಕೀಯ ಉಪಕರಣಗಳು ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲು 2020ರ ಮಾರ್ಚ್‌ನಲ್ಲಿ ವಿವಿಧ ಸಚಿವಾಲಗಳ ಅಧಿಕಾರಿಗಳ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿ ನಿರ್ದೇಶನದ ಮೇರೆಗೆ ಈ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಉಕ್ಕು ಕಾರ್ಖಾನೆಗಳಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಆಮ್ಲಜನಕವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ದೊಲ್ವಿಯಲ್ಲಿರುವ ಜೆಎಸ್‌ಡಬ್ಲ್ಯೂ ಉಕ್ಕು ಕಾರ್ಖಾನೆಯಲ್ಲಿ ಹೆಚ್ಚುವರಿಯಾಗಿ ಲಭ್ಯ ಇರುವ ವೈದ್ಯಕೀಯ ಆಮ್ಲಜನಕ ಬಳಸಿಕೊಳ್ಳಬೇಕು. ಅದೇ ರೀತಿ ಛತ್ತೀಸಗಡ ಸರ್ಕಾರ ಭಿಲಾಯಿಯಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರದ ಉಕ್ಕಿನ ಕಾರ್ಖಾನೆಯಿಂದ ಹಾಗೂ ಕರ್ನಾಟಕವು ಬಳ್ಳಾರಿ ಜಿಲ್ಲೆಯಲ್ಲಿರುವ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆಯಿಂದ ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಆಮ್ಲಜನಕದ ಸಾಗಾಣಿಕೆಯೂ ಸದ್ಯದ ಪ್ರಮುಖ ಸವಾಲಾಗಿದೆ. ಹೀಗಾಗಿ, ವೈದ್ಯಕೀಯ ಆಮ್ಲಜನಕವನ್ನು ಕೈಗಾರಿಕೆ ಸಿಲಿಂಡರ್‌ಗಳಲ್ಲಿ ಸಾಗಿಸಲು ಅವಕಾಶ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.