ನವದೆಹಲಿ: ದೇಶಕ್ಕೆ ತುರ್ತಾಗಿ ವೈದ್ಯಕೀಯ ಆಮ್ಲಜನಕದ ಅಗತ್ಯವಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ಸ್ಥಗಿತಗೊಳಿಸಿರುವ ತನ್ನ ಆಮ್ಲಜನಕ ಉತ್ಪಾದನಾ ಘಟಕವನ್ನು ಆರಂಭಿಸಲು ಸುಪ್ರೀಂ ಕೋರ್ಟ್ ಮಂಗಳವಾರ ವೇದಾಂತ ಕಂಪನಿಗೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ, 'ಈಗಾಗಲೇ ಸ್ಥಗಿತಗೊಳಿಸಿರುವ ತಾಮ್ರ ಘಟಕವನ್ನು ಆರಂಭಿಸಲು ಮತ್ತು ನಿರ್ವಹಿಸಲು ಅನುಮತಿ ನೀಡುವುದಿಲ್ಲ' ಎಂದು ಹೇಳಿದೆ.
ಆರೋಗ್ಯದ ವಿಷಯದಲ್ಲಿ ರಾಷ್ಟ್ರೀಯ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲಿ ವೇದಾಂತ ಕಂಪನಿ ಆಮ್ಲಜನಕ ಉತ್ಪಾದಿಸುವ ಬಗ್ಗೆ ಯಾವುದೇ ರೀತಿಯ ರಾಜಕೀಯ, ಗಲಾಟೆ ಮಾಡಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಆಮ್ಲಜನಕ ಉತ್ಪಾದನೆಯ ಮೇಲ್ವಿಚಾರಣೆಗಾಗಿ ತೂತುಕುಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಒಳಗೊಂಡ ಸಮಿತಿ ರಚಿಸುವಂತೆ ನ್ಯಾಯಪೀಠ ತಮಿಳು ನಾಡು ಸರ್ಕಾರಕ್ಕೆ ತಿಳಿಸಿದೆ.
'ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಸಲು, ನಿಮ್ಮ ಸರ್ಕಾರ ತೂತುಕುಡಿಯಲ್ಲಿರುವ ವೇದಾಂತ ಸ್ಟೆರ್ಲೈಟ್ ತಾಮ್ರದ ಘಟಕವನ್ನು ವಶಪಡಿಸಿಕೊಂಡು ಆಮ್ಲಜನಕ ಉತ್ಪಾದಿಸಲು ಏಕೆ ಬಳಸಬಾರದು' ಎಂದು ಏಪ್ರಿಲ್ 23 ರಂದು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರವನ್ನು ಕೇಳಿತ್ತು.
ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮೇ 2018ರಂದು ಈ ಘಟಕದ ಕಾರ್ಯವನ್ನು ಕಂಪನಿ ಸ್ಥಗಿತಗೊಳಿಸಿತ್ತು.