ಬೆಂಗಳೂರು : ಚಂದನವನದಲ್ಲಿ ಕೋಟಿ ನಿರ್ಮಾಪಕ ಎಂದೇ ಪ್ರಖ್ಯಾತರಾಗಿದ್ದ ಹಾಗೂ ಖ್ಯಾತ ನಟಿ ಮಾಲಾಶ್ರೀ ಪತಿ ರಾಮು ಅವರು ಕೊರೊನಾವೈರಸ್ ಸೋಂಕಿನಿಂದ ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವಾರದ ಹಿಂದೆಯಷ್ಟೇ ನಿರ್ಮಾಪಕ ರಾಮು ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಾಮು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಮೂರು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮು ಅವರು ಸೋಮವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಖ್ಯಾತ ನಿರ್ಮಾಪಕ ರಾಮು ಸಾವಿಗೆ ಚಂದನವನದ ನಟ-ನಟಿಯರು, ಸಂಗೀತ ನಿರ್ದೇಶಕರು, ನಿರ್ದೇಶಕರು ಹಾಗೂ ಹಿರಿಯ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಚಂದನವನದಲ್ಲಿ ಹಲವು ಚಿತ್ರಗಳ ನಿರ್ಮಾಣ:
ಚಂದನವನದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಾಮು ಅವರು ಕೋಟಿ ನಿರ್ಮಾಪಕ ಎಂತಲೇ ಪ್ರಖ್ಯಾತಿ ಗಳಿಸಿದ್ದರು. ಲಾಕಡ್ ಡೆತ್, ಕಲಾಸಿಪಾಳ್ಯ, ಎಕೆ 47, ರಾಕ್ಷಸ, ಸಿಬಿಐ ದುರ್ಗಾ, ಅರ್ಜುನ್ ಗೌಡ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.