ನವದೆಹಲಿ: ಮೇ 1 ರಿಂದ ಎಲ್ಲಾ ವಯಸ್ಕರಿಗೂ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗುತ್ತಿದ್ದು, ಈ ಬಾರಿ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಗಳ ಪ್ರಕಾರ ಮತ್ತು ಅವುಗಳ ಬೆಲೆ ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ.
ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದು, ಪ್ರತಿ ಖಾಸಗಿ ವ್ಯಾಕ್ಸಿನೇಷನ್ ಕೇಂದ್ರವು ಕೋವಿನ್, ಲಸಿಕೆ ಪ್ರಕಾರ(ಗಳು), ಲಸಿಕೆಗಳ ದಾಸ್ತಾನು ಮತ್ತು ನಾಗರಿಕರಿಗೆ ವಿಧಿಸುವ ಶುಲ್ಕದ ಬಗ್ಗೆ ಮಾಹಿತಿ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.
ಮೊದಲ ಹಂತದ ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಹಂತದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಮುನ್ನ ಫಲಾನುಭವಿಗಳಿಗೆ ಲಸಿಕೆಯ ಪ್ರಕಾರ ಮತ್ತು ಬೆಲೆ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ. ಈಗ ಮೂರನೇ ಹಂತದಲ್ಲಿ ಗಮನಾರ್ಹ ಸುಧಾರಣೆ ತರಲಾಗಿದ್ದು, ಫಲಾನುಭವಿಗಳು ಅಪಾಯಿಂಟ್ಮೆಂಟ್ ವೇಳೆಯೇ ಲಸಿಕೆ ಪ್ರಕಾರ ಮತ್ತು ಬೆಲೆ ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ.
ಹೊಸ ಲಸಿಕೆ ನೀತಿಯ ಪ್ರಕಾರ, 45 ವರ್ಷಕ್ಕಿಂತ ಮೇಲ್ಪಟ್ಟವರು ಕೇಂದ್ರ ಸರ್ಕಾರದ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ತೆಗೆದುಕೊಳ್ಳಬಹುದಾದರೂ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳು ಮೊದಲೇ ಬಹಿರಂಗಪಡಿಸಿದ ಬೆಲೆಯಲ್ಲಿ ಲಭ್ಯವಿರುತ್ತವೆ.