ಕಡಪ: 'ರಾಜಕೀಯ ಸನ್ಯಾಸ' ರಾಜಕೀಯ ನಾಯಕರು ಹೆಚ್ಚು ಬಳಸುವ ಪದವಾಗಿದೆ. ಐದು ದಶಕಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಮುಳುಗೆದ್ದ ನಾಯಕನೊಬ್ಬ ಏಕಾಏಕಿ ಸನ್ಯಾಸ ಸ್ವೀಕರಿಸಿರುವುದು ಆಂಧ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.
ಬದ್ವೇಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಶಿವರಾಮಕೃಷ್ಣ ರಾವ್, ರಾಜಮಂಡ್ರಿಯ ಪುಷ್ಕರ್ ಘಾಟ್‌ನಲ್ಲಿ ಗುರುಗಳ ಆಶೀರ್ವಾದದೊಂದಿಗೆ ಸನ್ಯಾಸ ವಿಧಿಗಳನ್ನು ಸ್ವೀಕರಿಸಿದರು. ಅವರು ಇನ್ನು ಮುಂದೆ ಸ್ವಾಮಿ ಶಿವರಾಮಾನಂದ ಸರಸ್ವತಿಯಾಗಿ ಮುಂದುವರಿಯಲಿದ್ದಾರೆ.
ಡಾ. ವಡ್ಡೆ ಮಾನು ಶಿವರಾಮಕೃಷ್ಣ ರಾವ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಬದ್ವೇಲು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಅಟ್ಟೂರು ಮಂಡಲಂನ ಕಮಲಕೂರು ಅವರ ಸ್ವಗ್ರಾಮ. ದಿವಂಗತ ಮುಖ್ಯಮಂತ್ರಿ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಅವರ ಆಪ್ತರಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
1977ರಲ್ಲಿ ಬದ್ವೇಲು ವಿಧಾನಸಭಾ ಕ್ಷೇತ್ರದಿಂದ ಮೊದಲು ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದರು. ಶಿವರಾಮಕೃಷ್ಣ ರಾವ್ ಅವರೊಂದಿಗೆ ಪುಲಿವೆಂದುಲದಿಂದ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಹಾಗೂ ಮೈದುಕೂರಿನ ಡಾ. ಡಿ.ಎಲ್.ರವೀಂದ್ರ ರೆಡ್ಡಿ 1977ರಲ್ಲಿ ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಗೊಂಡ ಮೂವರು ಯುವ ವೈದ್ಯರಾಗಿದ್ದರು.
ಈ ಶಾಸಕರು ಅಂದಿನ ರಾಜ್ಯ ರಾಜಕೀಯದಲ್ಲಿ ವಿಶೇಷ ಮನ್ನಣೆ ಗಳಿಸಿದ್ದರು. ನಂತರ ಹಲವು ಚುನಾವಣೆಗಳಲ್ಲಿ ಸೋತರೂ ರಾಜಕೀಯವಾಗಿ ಸಕ್ರೀಯರಾಗಿದ್ದರು. ಕಿರಣ್ ಕುಮಾರ್ ರೆಡ್ಡಿ ಸರ್ಕಾರದಲ್ಲಿ ಸಂಪುಟ ದರ್ಜೆ ಸ್ಥಾನಮಾನದ ಹುದ್ದೆ ಹೊಂದಿದ್ದರು.