ಕಾಸರಗೋಡು: ಕೇರಳದ 15ನೇ ವಿಧಾನಸಭೆಗಾಗಿ ಇಂದು ಚುನಾವಣೆ ಆರಂಭಗೊಂಡಿದ್ದು, ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆಯಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರಸಕ್ತ ಮೂರು ಕ್ಷೇತ್ರ ಎಡರಂಗ ಹಾಗೂ ಎರಡು ಐಕ್ಯರಂಗದ ವಶದಲ್ಲಿದೆ. ತೃಕ್ಕರಿಪುರ, ಹೊಸದುರ್ಗ, ಉದುಮ ಕ್ಷೇತ್ರ ಎಡರಂಗ ಹಾಗೂ ಕಾಸರಗೋಡು ಮತ್ತು ಮಂಜೇಶ್ವರ ಮುಸ್ಲಿಂಲೀಗ್ ನೇತೃಥ್ವದ ಐಕ್ಯರಂಗದ ವಶದಲ್ಲಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ 89ಮತಗಳ ಅಂತರದಿಂದ ಬಿಜೆಪಿ ಐಕ್ಯರಂಗದ ವಿರುದ್ಧ ಸೋಲನುಭವಿಸಿದ್ದು, ಈ ಬಾರಿ ಶತಾಯಗತಾಯ ಗೆಲುವು ಸಾಧಿಸಲು ಬಿಜೆಪಿ ಪಣತೊಟ್ಟಿದೆ. ಕಾಸರಗೋಡು ಕ್ಷೇತ್ರವನ್ನೂ ಐಕ್ಯರಂಗದಿಂದ ಕಸಿಯಲು ಬಿಜೆಪಿ ತನ್ನ ಪ್ರಚಾರವೈಖರಿಯಲ್ಲಿ ಬದಲಾವಣೆ ತಂದುಕೊಂಡಿರುವುದು ಗಮನಾರ್ಹವಾಗಿತ್ತು.
ಎರಡೂ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಬಿಜೆಪಿಯ ಸ್ಟಾರ್ ಪ್ರಚಾರಕರ ದಂಡು ಜಿಲ್ಲೆಗಾಗಮಿಸಿತ್ತು. ಕೇಂದ್ರ ಸಚಿವೆ ಸ್ಮøತಿ ಇರಾನಿ ಜಿಲ್ಲೆಯಲ್ಲಿ ನಡೆಸಿದ ರೋಡ್‍ಶೋ ಮತದಾರರಲ್ಲಿ ಆವೇಶ ತಂದುಕೊಟ್ಟಿತ್ತು. ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ ಮುಂತಾದ ಕರ್ನಾಟಕದ ಸಚಿವರು, ದ.ಕ ಜಿಲ್ಲೆಯ ಎಲ್ಲ ಶಾಸಕರೂ ಪ್ರಚಾರಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದಬಾರಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಐಕ್ಯರಂಗದ ಎನ್.ಎ ನೆಲ್ಲಿಕುನ್ನು ಹಾಗೂ ಬಿಜೆಪಿಯ ರವೀಶ ತಂತ್ರಿ ಕುಂಟಾರು ನಡುವೆ ಪ್ರಬಲ ಹೋರಾಟ ನಡೆದಿದ್ದು, ಎನ್.ಎ ನೆಲ್ಲಿಕುನ್ನು 64727 ಮತ ಹಾಗೂ ರವೀಶ ತಂತ್ರಿ ಅವರು 56120ಮತಗಳನ್ನು ಪಡೆದುಕೊಂಡಿದ್ದರು. ಮಂಜೇಶ್ವರದಲ್ಲಿ ಐಕ್ಯರಂಗದ ಪಿ.ಬಿ ಅಬ್ದುಲ್ ರಜಾಕ್ 56870ಮತ ಹಾಗೂ ಬಿಜೆಪಿಯ ಕೆ. ಸುರೇಂದ್ರನ್56781ಮತಗಳನ್ನು ಪಡೆದಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಐಕ್ಯರಂಗ ಮತ್ತೆ ಗೆಲುವು ಸಾಧಿಸಿತ್ತು. ಕಾಞಂಗಾಡಿನಿಂದ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಮತ್ತೆ ಜನಾದೇಶ ಪಡೆಯುತ್ತಿದ್ದಾರೆ.
ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಆಶಯದೊಂದಿಗೆ ಎಡರಂಗ ಬಿರುಸಿನ ಪ್ರಚಾರದಲ್ಲಿ ತೊಡಗಿದೆ. 140ಸ್ಥಾನಗಳಲ್ಲಿ 71ರ ಮ್ಯಾಜಿಕ್ ಸಂಖ್ಯೆ ದಾಟಲು ಎಡರಂಗ ಹಾಗೂ ಐಕ್ಯರಂಗ ಹರಸಾಹಸಪಡುತ್ತಿದ್ದರೆ, ಇತ್ತ 35ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎನ್‍ಡಿಎ ನೇತೃತ್ವದಲ್ಲೇ ಸರ್ಕಾರ ರಚಿಸುವುದಾಗಿ ಮುಖಂಡರು ರಂಗಕ್ಕಿಳಿದಿದ್ದಾರೆ. ನೇಮಂ ವಿಧಾನಸಭೆಯಲ್ಲಿ ಬಿಜೆಪಿ ಮೊತ್ತಮೊದಲ ಖಾತೆ ತೆರೆದಿದ್ದು, ಇದನ್ನು ಉಳಿಸಿಕೊಳ್ಳುವುದರ ಜತೆಗೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಆಶಾಭಾವನೆ ವ್ಯಕ್ತಪಡಿಸಿದೆ. ಮೆಟ್ರೋಮ್ಯಾನ್ ಖ್ಯಾತಿಯ ಇ.ಶ್ರೀಧರನ್, ಚಿತ್ರ ನಟ ಸುರೇಶ್ ಗೋಪಿ, ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ಬೆಂಕಿಚೆಂಡು ಎಂದೇ ಖ್ಯಾತಿ ಪಡೆದಿರುವ ಶೋಭಾ ಸುರೇಂದ್ರನ್ ಮುಂತಾದ ಪ್ರಭಾವೀ ನಾಯಕರು ಕಣದಲ್ಲಿದ್ದಾರೆ. ಇವರೆಲ್ಲರ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‍ಷಾ ಒಳಗೊಂಡಂತೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಕೇರಳದಲ್ಲಿ ಪ್ರಚಾರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನವಕೇರಳ ಸೃಷ್ಟಿಸುವ ಧ್ಯೇಯದೊಂದಿಗೆ ಬಿಜೆಪಿ ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ.
ಕೆಲವೊಂದು ಖಾಸಗಿ ವಾಹಿನಿಗಳು ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಎಡರಂಗ ಮತ್ತೆ ಅಧಿಕಾರಕ್ಕೇರುವುದಾಗಿ ವರದಿ ಪ್ರಕಟಿಸಿದ ಬೆನ್ನಿಗೆ ಪ್ರತಿಪಕ್ಷಗಳು ಮತ್ತೆ ಚುರುಕಾಗಿ ತಮ್ಮ ಪ್ರಚಾರಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುತ್ತಿದ್ದಂತೆ ಸಮೀಕ್ಷೆ ಚಿತ್ರಣದಲ್ಲಿ ಮತ್ತೆ ಬದಲಾಗುವ ಸೂಚನೆಯೂ ವ್ಯಕ್ತವಾಗತೊಡಗಿದೆ.
ಚಿನ್ನ ಕಳ್ಳ ಸಾಗಾಟ, ಅನಧಿಕೃತ ಡಾಲರ್ ಸಾಗಾಟ, ಆಳಸಮುದ್ರ ಒಪ್ಪಂದ ಹೀಗೆ ಹತ್ತು ಹಲವು ಪ್ರಕರಣ ಸರ್ಕಾರವನ್ನು ಸುತ್ತಿಕೊಂಡಿದ್ದರೂ, ಸಾರ್ವಜನಿಕರಿಗೆ ಕಿಟ್ ವಿತರಣೆ, ಪಿಂಚಣಿ ವಿತರಣೆ ಸೇರಿದಂತೆ ಕೆಲವೊಂದು ಸಾಮಾಜಿಕ ಕಾರ್ಯಗಳನ್ನು ಮುಂದಿಟ್ಟುಕೊಂಡು ಎಡರಂಗ ಪ್ರಚಾರಕಾರ್ಯವನ್ನು ಚುರುಕುಗೊಳಿಸಿದೆ. ಕಾಂಗ್ರೆಸ್ ರಾಹುಲ್‍ಗಾಂಧಿಯನ್ನು ಮುಂಚೂಣಿಯಲ್ಲಿರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು.
ಕಾಸರಗೋಡಿನಲ್ಲಿ ಐದು ಕ್ಷೇತ್ರ:
ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕಪುರ ವಿಧಾನಸಭೆ ಕ್ಷೇತ್ರಗಳ 1591ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇವುಗಳಲ್ಲಿ 983 ಪ್ರಧಾನ ಮತಗಟ್ಟೆಗಳು, 608 ತಾತ್ಕಾಲಿಕ ಮತಗಟ್ಟೆಗಳು ಇರಲಿದೆ. ವಿಧಾನಸಭೆ ಚುನಾವಣೆ ಅಂಗವಾಗಿ ಮತದಾರರ ಪಟ್ಟಿಯಲ್ಲಿ 2021 ಜ.20ರ ನಂತರ ನೂತನವಾಗಿ ಸೇರ್ಪಡೆಗೊಂಡಿರುವವರೂ ಸೇರಿ ಜಿಲ್ಲೆಯಲ್ಲಿ ಒಟ್ಟು 10,59,967 ಮಂದಿ ಮತದಾರರಿದ್ದಾರೆ. ಇವರಲ್ಲಿ ಆನಿವಾಸಿ ಮತದಾರರೂ ಸೇರಿ ಒಟ್ಟು 1058337 ಮಂದಿಸಾಮಾನ್ಯ ಮತದಾರರು, 1630 ಸೇವಾ ಮತದಾರರು ಇದ್ದಾರೆ. ಒಟ್ಟು ಮತದಾರರಲ್ಲಿ 518501ಮಂದಿ ಪುರುಷರು, 541460 ಮಂದಿ ಮಹಿಳೆಯರು, 6 ಮಂದಿ ತೃತೀಯ ಲಿಂಗಿಗಳು ಇದ್ದಾರೆ.