ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿದೆ. ಕೊರೋನಾ ಸ್ಫೋಟವೇ ಸಂಭವಿಸಿದೆ. ಈ ಸಂದರ್ಭದಲ್ಲಿ ಹಿಂದೂಗಳ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದಲ್ಲಿ ಲಕ್ಷಗಟ್ಟಲೆ ಜನ ಸೇರುವುದನ್ನು ಹಲವರು ವಿರೋಧಿಸುತ್ತಿದ್ದಾರೆ.
ಕೊರೋನಾ ಸೋಂಕು ತಾಂಡವವಾಡುತ್ತಿರುವಾಗ ಕುಂಭಮೇಳ ನಡೆಸುವ ಅನಿವಾರ್ಯತೆ ಏನಿದೆ ಎಂದು ದೇಶದ ನಾಗರಿಕರು ಪ್ರಶ್ನಿಸುತ್ತಿರುವಾಗ ಕುಂಭಮೇಳವನ್ನು ಕೇವಲ ಸಾಂಕೇತಿಕವಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಕುಂಭಮೇಳ ಉತ್ತೇಜನ ನೀಡಬೇಕು. ಹಿರಿಯ ಸಂತ ಹಾಗೂ ಹಿಂದೂ ಧರ್ಮ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಆದ್ವೇಶಾನಂದ ಗಿರಿಜಿ ಮಹಾರಾಜ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸ್ಥಳೀಯ ಆಡಳಿತ ಜೊತೆ ಸಹಕರಿಸಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಿ ಎಂದು ನಾನು ಹೇಳಿದ್ದಕ್ಕೆ ಸ್ಪಂದಿಸಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸಾಮಾನ್ಯ ಸಮಯಗಳಲ್ಲಾದರೆ ಪ್ರತಿ 12 ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಜನವರಿ ಮಧ್ಯಭಾಗದಿಂದ ಆಚರಿಸಲು ಆರಂಭಿಸಿ ಏಪ್ರಿಲ್ ವರೆಗೆ ಮುಂದುವರಿಯುತ್ತದೆ. ಆದರೆ ಈ ಬಾರಿ ಕುಂಭಮೇಳವನ್ನು ದಿನಗಳ ಮಟ್ಟಿಗೆ ಸೀಮಿತಗೊಳಿಸಲಾಗಿತ್ತು.