ನವದೆಹಲಿ:ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಿಂದಾಗಿ ಬೆಳವಣಿಗೆಯ ವೇಗವು ಕುಂಠಿತಗೊಂಡಿರುವುದರಿಂದ ಮತ್ತು ತಯಾರಿಕೆ ವೆಚ್ಚದಲ್ಲಿ ಹೆಚ್ಚಳವಾಗಿರುವುದರಿಂದ ಮಾರ್ಚ್ ತಿಂಗಳಿನಲ್ಲಿ ಭಾರತದ ತಯಾರಿಕೆ ವಲಯದಲ್ಲಿ ಚಟುವಟಿಕೆಗಳು ಕುಸಿತವನ್ನು ಕಂಡಿವೆ.
ಮಾರಾಟದಲ್ಲಿ ಮತ್ತೊಂದು ತೇಜಿಗೆ ಅನುಗುಣವಾಗಿ ಕಂಪನಿಗಳು ಉತ್ಪಾದನೆಯನ್ನು ಮತ್ತು ಕಚ್ಚಾವಸ್ತುಗಳ ಖರೀದಿಯನ್ನು ಹೆಚ್ಚಿಸಿದ್ದವು. ಆದರೆ ಕೋವಿಡ್-19 ನಿರ್ಬಂಧಗಳ ವಿಸ್ತರಣೆ ಮತ್ತು ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಕ್ರಮಗಳಿಂದಾಗಿ ಉದ್ಯೋಗಿಗಳ ಸಂಖ್ಯೆ ಕುಗ್ಗಿದ್ದು,ಇದು ಅವುಗಳ ತಯಾರಿಕೆ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿವೆ. ತಯಾರಿಕೆ ವೆಚ್ಚವು ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕ ಮಟ್ಟವನ್ನು ತಲುಪಿದೆ,ಆದರೆ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು ಮತ್ತು ಮಾರಾಟವನ್ನು ಹೆಚ್ಚಿಸಲು ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿವೆ ಎಂದು ಐಎಚ್‌ಎಸ್ ಮರ್ಕಿಟ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್(ಪಿಎಂಐ) ವರದಿಯು ತಿಳಿಸಿದೆ. ಇದರಿಂದಾಗಿ ತಯಾರಿಕೆ ಚಟುವಟಿಕೆಗಳ ಪಿಎಂಐ ಫೆಬ್ರವರಿಯಲ್ಲಿ ಶೇ.57.5 ಇದ್ದುದು ಮಾರ್ಚ್‌ನಲ್ಲಿ ಶೇ.55.4ಕ್ಕೆ ಕುಸಿದಿದೆ ಎಂದು ವರದಿಯು ಹೇಳಿದೆ.