ಹೈದರಾಬಾದ್: ಕೋವಿಡ್ ಸೋಂಕು ಹರಡುವಿಕೆ ತಡೆಗೆ ಪೂರಕ ಎನ್ನಲಾದ ಸ್ವಚ್ಛತೆಗೆ ಬಳಸುವ ಡ್ಯುರೊಕಿಯಾ ಸರಣಿಯ ಪರಿಕರಗಳನ್ನು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಶುಕ್ರವಾರ ಬಿಡುಗಡೆ ಮಾಡಿದರು.
ಐಐಟಿ ಹೈದರಾಬಾದ್‌ನ ಸಂಶೋಧಕರು, ಎಥೆನಾಲ್ ಆಧರಿಸಿದ ಈ ಸ್ಪ್ರೇ, ಸೋಂಕು ನಿವಾರಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಉತ್ಪನ್ನ ಬಳಸಿ ಒಮ್ಮೆ ಸ್ಪ್ರೇ ಮಾಡಿದರೆ ಅದರ ಪರಿಣಾಮ 35 ದಿನ ಇರುತ್ತದೆ. ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಹೆಚ್ಚಿನ ಅವಧಿ ಪರಿಣಾಮಕಾರಿಯಾಗಿರುತ್ತದೆ.
ಮಾಸ್ಕ್‌ಗಳಿಗೆ ಬಳಸಬಹುದಾದ ಸೋಂಕು ನಿವಾರಕ ಸ್ಪ್ರೇ ಪರಿಣಾಮ, ಮಾಸ್ಕ್ ಅನ್ನು ನೀರಿನಿಂದ ತೊಳೆಯುವವರೆಗೂ ಇರುತ್ತದೆ. ಆಲ್ಕೊಹಾಲ್ ಮುಕ್ತ ಸ್ಯಾನಿಟೈಸರ್, ಶಿಶುವಿಗೆ ಚರ್ಮ ರಕ್ಷಕ ಪರಿಕರ ಇತರೆ ಉತ್ಪನ್ನಗಳಾಗಿವೆ.
ಡ್ಯುರೊಕಿಯಾ ಉತ್ಪಾದಕರು ತಮ್ಮ ಉತ್ಪನ್ನಗಳು ಕೋವಿಡ್-19 ಸೋಂಕು ಸೇರಿದಂತೆ ಸೂಕ್ಷ್ಮ ವೈರಾಣುಗಳನ್ನು 60 ಕ್ಷಣದಲ್ಲಿ ನಿರ್ಮೂಲನೆ ಮಾಡುತ್ತವೆ ಎಂದು ಸಂಸ್ಥೆಯು ಹೇಳಿಕೊಂಡಿದೆ.
ಐಐಟಿ-ಎಚ್ ಸಂಶೋಧಕರು ಸಮಾಜ, ಪರಿಸರ ರಕ್ಷಣೆಗೆ ಪೂರಕವಾದ ಉತ್ಪನ್ನಗಳ ಸಂಶೋದನೆಯಲ್ಲಿ ತೊಡಗಿರುವುದು ನನಗೆ ಖುಷಿ ನೀಡಿದೆ ಎಂದು ಉತ್ಪನ್ನ ಬಿಡುಗಡೆ ಮಾಡಿದ ಸಚಿವರು ಹೇಳಿದರು.
ಸೂಕ್ಷ್ಮವೈರಾಣುಗಳ ನಿರೋಧಕವಾದ ಡ್ಯೂರೊಕಿಯಾ ಉತ್ಪನ್ನಗಳು ₹ 189ರಿಂದ ಆರಂಭವಾಗಲಿದ್ದು, ಕ್ಷಿಪ್ರವಾಗಿ ಶೇ 99.99ರಷ್ಟು ಸೋಂಕು ಕೊಲ್ಲಲಿವೆ ಎಂದು ಐಐಟಿಎಚ್ ಹೇಳಿಕೆ ತಿಳಿಸಿದೆ. ಜೀವವೈದ್ಯಕೀಯ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜ್ಯೋತ್ಸೆನೆಂದ್ರು ಗಿರಿ ನೇತೃತ್ವದ ತಂಡ ಇವನ್ನು ಅಭಿವೃದ್ಧಿಪಡಿಸಿದೆ.