ನವದೆಹಲಿ: ಜನವರಿಯಿಂದಲೂ ದೇಶದಲ್ಲಿ ಏರಿಕೆಯಾಗುತ್ತಿದ್ದ ತೈಲ ಬೆಲೆಗಳು ಮಾರ್ಚ್ ಕೊನೆಯಿಂದಲೂ ಸ್ಥಿರವಾಗಿದ್ದು, ಸಾಂಕ್ರಾಮಿಕ ರೋಗದಿಂದ ಕಂಗಲಾದ ಮಧ್ಯಮ ದರ್ಜೆಯ ಜನರನ್ನು ಸ್ವಲ್ವ ನಿರಾಳವಾಗುವಂತಾಗಿದೆ.
ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಪ್ರಗತಿಯ ಪರಿಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲೂ ತೈಲ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ಬೆಲೆಯಲ್ಲಿ ಇದೀಗ ಇಳಿಕೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲೂ ತೈಲ ಬೆಲೆ ಕಡಿಮೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುವುದರಿಂದ ಆಗುವ ಲಾಭವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಈ ಹಿಂದೆಯೇ ಹೇಳಿಕೆ ನೀಡಿದ್ದಾಗಿ ಅವರು ಹೇಳಿರುವುದಾಗಿ ಯುಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.
ತನ್ನ ಅಗತ್ಯವನ್ನು ಪೂರೈಸಲು ದೇಶ ಶೇ. 85 ರಷ್ಟು ಕಚ್ಚಾ ತೈಲ ಆಮದಿನ ಮೇಲೆ ಅವಲಂಬಿತವಾಗಿರುವುದರಿಂದ ಇಲ್ಲಿನ ರಿಟೈಲ್ ಇಂಧನ ಬೆಲೆಗಳು ಅಂತಾರಾಷ್ಟ್ರೀಯ ದರಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಧರ್ಮೇಂದ್ರ ಪ್ರಧಾನ್ ಈ ಹಿಂದೆಯೇ ಹೇಳಿಕೆ ನೀಡಿದ್ದರು.
ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಣದ ಅಗತ್ಯವಿರುವುದರಿಂದ ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಕೂಡಾ ಅವರು ತಿಳಿಸಿದ್ದರು.
ಭಾನುವಾರ ಪೆಟ್ರೋಲ್ , ಡೀಸೆಲ್ ಬೆಲೆ
ಭಾನುವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಬೆಲೆ 90.56 ಪೈಸೆಯಿದ್ದರೆ, ಡೀಸೆಲ್ ಬೆಲೆ 80.87 ರಷ್ಟಿತ್ತು.