ಏನಿದು ವೈದ್ಯಕೀಯ ಆಮ್ಲಜನಕ?
82% ಪರಿಶುದ್ಧವಾದ ಆಮ್ಲಜನಕವನ್ನು ವೈದ್ಯಕೀಯ ಆಮ್ಲಜನಕ ಎನ್ನುತ್ತಾರೆ. ಅದು ಎಲ್ಲ ಬಗೆಯ ಕಲಬೆರಕೆಯಿಂದ ಮುಕ್ತವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಉಸಿರಾಡುವ ನೈಸರ್ಗಿಕ ಆಮ್ಲಜನಕದಲ್ಲಿ ಕೇವಲ 21% ಆಮ್ಲಜನಕವಿದ್ದು ಉಳಿದಂತೆ ಬೇರೆ ಬೇರೆ ಅನಿಲಗಳಿರುತ್ತವೆ.
ಎಲ್ಲಿ ಉತ್ಪಾದನೆ?
ವೈದ್ಯಕೀಯ ಆಮ್ಲಜನಕವನ್ನು ಸಾಂಪ್ರದಾಯಿಕವಾಗಿ ಗಾಳಿ ಪ್ರತ್ಯೇಕಿಸುವ ಘಟಕಗಳಲ್ಲಿ ಉತ್ಪಾದಿಸಲಾಗುತ್ತದೆ. ಪರಿಸರದ ಗಾಳಿಯನ್ನು ವಿವಿಧ ಘಟಕಗಳಾಗಿ ಒಡೆದು ತಯಾರಿಸಲಾಗುತ್ತದೆ. ಪ್ರೆಷರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ಎ) ಇನ್ನೊಂದು ವಿಧಾನವಾಗಿದೆ.
ಸಮಸ್ಯೆಯೇನು?
ದೇಶದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಮಾತ್ರವಲ್ಲದೆ ಸರಬರಾಜು ಸರಪಳಿಯಲ್ಲಿ ಕೂಡ ಸಮಸ್ಯೆಯಿದೆ. ಸದ್ಯ, ಉತ್ಪಾದನೆ ಹೆಚ್ಚಳ ಹಾಗೂ ಸಾಗಾಟಕ್ಕೆ ಯಾವುದೇ ಅಡ್ಡಿ ಆಗದಂತೆ ಕ್ರಮವಹಿಸಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.
ಉತ್ಪಾದನೆ ಹೆಚ್ಚಳಕ್ಕೆ ಕ್ರಮ
32 ರಾಜ್ಯಗಳ ಜಿಲ್ಲಾ ಆಸ್ಪತ್ರೆಗಳಲ್ಲಿ 162 ಪಿಎಸ್ಎ ಸ್ಥಾವರ ಸ್ಥಾಪನೆಗೆ ಕೇಂದ್ರ ಸರ್ಕಾರ ಕಳೆದ ವರ್ಷ 200 ಕೋಟಿ ರೂಪಾಯಿಗಳ ಟೆಂಡರ್ ಕರೆದಿತ್ತು. ಒಂದು ವರ್ಷ ಕಳೆದರೂ ಆ ಪೈಕಿ ಕೇವಲ 33 ಸ್ಥಾವರಗಳನ್ನು ಸ್ಥಾಪಿಸಲಾಗಿದೆ.
ಹೆಚ್ಚಿದ ಬೇಡಿಕೆ
ಕಳೆದ ವಾರ ದೈನಂದಿನ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯ ಶೇಕಡ 60ರಷ್ಟು ಬೇಡಿಕೆ ಇತ್ತು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಪ್ರವರ್ತನೆ ಇಲಾಖೆ (ಡಿಪಿಐಐಟಿ) ಹೇಳಿದೆ. ದೈನಂದಿನ ಉತ್ಪಾದನೆ 7,200 ಮೆಟ್ರಿಕ್ ಟನ್ (ಎಂಟಿ). ಆದರೆ ದೈನಿಕ ಬೇಡಿಕೆ 8,000 ಎಂಟಿಗೂ ಹೆಚ್ಚಿದೆ ಎಂದು ಡಿಪಿಐಐಟಿ ಏಪ್ರಿಲ್ 21ರಂದು ದೆಹಲಿ ಹೈ ಕೋರ್ಟ್ಗೆತಿಳಿಸಿತ್ತು. ಅಂದರೆ, ನಿತ್ಯದ ಉತ್ಪಾದನೆಗಿಂತ ಬೇಡಿಕೆಯೇ ಹೆಚ್ಚಾಗಿತ್ತು.
ಕೋವಿಡ್ ಚಿಕಿತ್ಸೆಗೆ ಅಗತ್ಯ
ಕರೊನಾ ಗಂಭೀರ ಪ್ರಕರಣಗಳಲ್ಲಿ ರೋಗಿಯ ದೇಹದ ಆಮ್ಲಜನಕ ಪ್ರಮಾಣ ತೀವ್ರವಾಗಿ ಕುಸಿಯಬಹುದು. ಆಗ ದೇಹದ ಕೋಶಗಳಿಗೆ ತಮ್ಮ ಕಾರ್ಯ ನಿರ್ವಹಿಸಲು ಸಾಕಾಗುವಷ್ಟು ಆಕ್ಸಿಜನ್ ಸಿಗುವುದಿಲ್ಲ. ದೇಹಕ್ಕೆ ಆಮ್ಲಜನಕ ವನ್ನು ಸರಬರಾಜು ಮಾಡದಿದ್ದರೆ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿ ರೋಗಿ ಮೃತಪಟುವ ಸಾಧ್ಯತೆ ಇದೆ. ಆಕ್ಸಿಜನ್ ಮಟ್ಟ ಕಾಯ್ದುಕೊಳ್ಳಲು ರೋಗಿಗೆ ಮೆಡಿಕಲ್ ಆಕ್ಸಿಜನ್ ನೀಡಬೇಕಾಗುತ್ತದೆ.