ನಾಗಪುರ: ಭಾರತದ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ಮತ್ತು ಜನರಿಗೆ ಏನು ಬೇಕು ಎಂದು ತಿಳಿದಿದ್ದರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂಸ್ಕೃತವನ್ನು 'ಅಧಿಕೃತ ರಾಷ್ಟ್ರೀಯ ಭಾಷೆ' ಮಾಡಬೇಕೆಂದು ಪ್ರಸ್ತಾವನೆ ಇಟ್ಟಿದ್ದರು ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ಮಹಾರಾಷ್ಟ್ರ ನ್ಯಾಷನಲ್ ಲಾ ಯೂನಿವರ್ಸಿಟಿಯ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಂಬೇಡ್ಕರ್ ಅವರ 130ನೇ ಜಯಂತಿಯಾದ ಇಂದು ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿದರು. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ನಾಗಪುರ ಸಂಸದರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತಿತರರು ವರ್ಚುವಲ್ ಆಗಿ ಭಾಗವಹಿಸಿದರು.
'ಇಂದು ಬೆಳಿಗ್ಗೆ ನನಗೆ ಯಾವ ಭಾಷೆಯಲ್ಲಿ ಮಾತನಾಡಬೇಕೆಂಬ ಗೊಂದಲ ಉಂಟಾಯಿತು. ಇಂದು ಡಾ. ಅಂಬೇಡ್ಕರ್ ಜಯಂತಿಯಾದ್ದರಿಂದ ಮಾತಾಡುವಾಗ ಬಳಸುವ ಭಾಷೆ ಮತ್ತು ಕೆಲಸ ಮಾಡುವಾಗ ಬಳಸುವ ಭಾಷೆಗಳ ಘರ್ಷಣೆ ತುಂಬಾ ಹಳೆಯದ್ದು ಎಂಬುದು ನೆನಪಾಯಿತು' ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. ಕೆಳನ್ಯಾಯಾಲಯಗಳಲ್ಲಿ ಯಾವ ಭಾಷೆಯನ್ನು ಬಳಸಬೇಕೆಂಬ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಹಲವು ಬೇಡಿಕೆ ಪತ್ರಗಳು ಬರುತ್ತವೆ. ಆದರೆ ಈ ವಿಚಾರದ ಬಗ್ಗೆ ಪರಾಮರ್ಶೆ ನಡೆಯುತ್ತಿಲ್ಲ ಎಂದನಿಸುತ್ತದೆ ಎಂದ ನ್ಯಾಯಮೂರ್ತಿ ಬೊಬ್ಡೆ, 'ಆದರೆ, ಅಂಬೇಡ್ಕರ್ ಅವರು ದೇಶದ ಬಡಜನರಿಗೆ ಏನು ಬೇಕು ಎಂದು ಅರಿತಿದ್ದರು. ಈ ವಿಚಾರವನ್ನು ಆಲೋಚಿಸಿ, ಸಂಸ್ಕೃತವು ಭಾರತ ಸರ್ಕಾರದ ಅಧಿಕೃತ ಭಾಷೆ ಆಗಬೇಕು ಎಂದು ಹೇಳಿದ್ದರು' ಎಂದರು.
ನ್ಯಾಷನಲ್ ಲಾ ಯೂನಿವರ್ಸಿಟಿಯ ಒಂದು ಪ್ರಯೋಜನವೆಂದರೆ ಇಲ್ಲಿ ಪ್ರಾದೇಶಿಕತೆ ಮತ್ತು ಸಂಕುಚಿತ ಮನೋಭಾವ ಇರುವುದಿಲ್ಲ ಎಂದು ಶ್ಲಾಘಿಸಿದ ನ್ಯಾಯಮೂರ್ತಿಗಳು, ಇಲ್ಲಿ 'ನ್ಯಾಯಶಾಸ್ತ್ರ'ದ ಬಗ್ಗೆ ಒಂದು ವಿಶೇಷ ಕೋರ್ಸ್ ಇರುವುದು ತುಂಬಾ ಸಂತೋಷದ ವಿಚಾರ ಎಂದರು.
'ಬ್ರಿಟೀಷರಿಂದ ಪಡೆದ ಭಾರತೀಯ ನ್ಯಾಯವ್ಯವಸ್ಥೆ ತರ್ಕವನ್ನು ಆಧರಿಸಿದ್ದು, ಈ ತರ್ಕದ ಮೂಲ ಅರಿಸ್ಟಾಟಲ್ನ ತತ್ವಜ್ನಾನವಾಗಿದೆ. ಆದರೆ ಪುರಾತನ ಭಾರತದ ಪಠ್ಯವಾದ ನ್ಯಾಯಶಾಸ್ತ್ರವು ಅರಿಸ್ಟಾಟಲ್ ಮತ್ತು ಪರ್ಷಿಯನ್ ತರ್ಕಕ್ಕಿಂತ ಕಿಂಚಿತ್ತೂ ಕೆಳಮಟ್ಟದ್ದಲ್ಲ' ಎಂದು ಮುಖ್ಯ ನ್ಯಾಯಮೂರ್ತಿಗಳು,'ನಮ್ಮ ಪೂರ್ವಜರ ಬುದ್ಧಿಶಕ್ತಿಯನ್ನು ತ್ಯಜಿಸಿ, ಕಡೆಗಣಿಸಿ, ಪ್ರಯೋಜನ ಪಡೆಯದಿರಲು ಯಾವುದೇ ಕಾರಣಗಳಿಲ್ಲ. ಆ ಉದ್ದೇಶದಿಂದಲೇ ನ್ಯಾಯಶಾಸ್ತ್ರದ ಮೇಲೆ ಕೋರ್ಸ್ ಆರಂಭಿಸಲಾಗಿದೆ' ಎಂದರು.