ತಿರುವನಂತಪುರ: ರಾಜ್ಯದ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ -19 ಆರ್‍ಟಿಪಿಸಿಆರ್ ಪರೀಕ್ಷೆಗೆ ಕೊನೆಗೂ ದರ ಕಡಿಮೆ ಮಾಡಲಾಗಿದೆ. ಇತರ ರಾಜ್ಯಗಳಿಗಿಂತ ಕೇರಳದಲ್ಲಿ ಹೆಚ್ಚಿನ ದರವನ್ನು ವಿಧಿಸುವುದರ ವಿರುದ್ಧ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಕಡಿತವಾಗಿದೆ. ದರವನ್ನು 1,700 ರೂ.ಗಳಿಂದ 500 ರೂ.ಗೆ ಇಳಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಮಾಹಿತಿ ನೀಡಿರುವರು.
ಐಸಿಎಂಆರ್ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಅನುಮೋದಿತ ಪರೀಕ್ಷಾ ಕಿಟ್‍ಗಳ ಲಭ್ಯತೆಯ ದೃಷ್ಟಿಯಿಂದ ತಪಾಸಣೆ ದರವನ್ನು ಕಡಿಮೆ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಹಿಂದೆ ಆರ್‍ಟಿಪಿಸಿಆರ್ ತಪಾಸಣೆಗಾಗಿ 1,500 ರೂ. ವಿಧಿಸಲಾಗುತ್ತಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದನ್ನು 1700 ರೂ.ಗೆ ಹೆಚ್ಚಿಸಲಾಗಿತ್ತು ಎಂದು ಸಚಿವರು ಹೇಳಿದರು.
ಈ ದರವು ಪರೀಕ್ಷಾ ಕಿಟ್, ಎಲ್ಲಾ ವೈಯಕ್ತಿಕ ಸುರಕ್ಷತಾ ಸಾಧನಗಳು ಮತ್ತು ಸ್ವ್ಯಾಬ್ ಶುಲ್ಕವನ್ನು ಒಳಗೊಂಡಿದೆ. ಐಸಿಎಂ ಆರ್ ಮತ್ತು ರಾಜ್ಯ-ಮಾನ್ಯತೆ ಪಡೆದ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳಿಗೆ ಈ ದರದಲ್ಲಿ ಮಾತ್ರ ಪರೀಕ್ಷಿಸಲು ಅವಕಾಶವಿದೆ. ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುತ್ತದೆ.
..........