ಮುಂಬೈ: ವಿದರ್ಭ ವಿಭಾಗದ ಅಮರಾವತಿ ಜಿಲ್ಲೆಯು ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಮಾದರಿ ದೇಶದ ಗಮನ ಸೆಳೆದಿದೆ.
ಫೆಬ್ರುವರಿ ಆರಂಭದಲ್ಲಿ ಜಿಲ್ಲೆಯಲ್ಲಿ ದಿನಕ್ಕೆ 1,200 ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಮೊದಲಿಗೆ ವಾರಾಂತ್ಯದ ಲಾಕ್‌ಡೌನ್ ವಿಧಿಸಲಾಯಿತು. ಬಳಿಕ 10-12 ದಿನಗಳ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಯಿತು. ಪ್ರಕರಣಗಳು 250ಕ್ಕೆ ಇಳಿಕೆಯಾದವು' ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ತಿಳಿಸಿದ್ದಾರೆ.
ಲಾಕ್‌ಡೌನ್‌ಗೆ ವಿರೋಧ ವ್ಯಕ್ತವಾದರೂ ಅದರಲ್ಲಿ ಯಶಸ್ಸು ಸಿಕ್ಕಿತು. ಪರಿಸ್ಥಿತಿ ತಿಳಿಯಾದ ಬಳಿಕ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಯಿತು. ಜಿಲ್ಲೆಯಲ್ಲಿ ದಿನಕ್ಕೆ 5 ಸಾವಿರ ಮಂದಿಗೆ ಲಸಿಕೆ ಹಾಕಲಾಯಿತು. ಮಹಾರಾಷ್ಟ್ರ ಸರ್ಕಾರವು ಈಗ ಅಮರಾವತಿ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ಠಾಕೂರ್ ಹೇಳಿದ್ದಾರೆ.