ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಕೇಂದ್ರ ಸರ್ಕಾರ ಈ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸದಿರುವುದೇ ಇರುವುದೇ ಇದಕ್ಕೆ ಕಾರಣ ಎಂದು ದೂರಿರುವ ಕಾಂಗ್ರೆಸ್ ಮುಖಂಡ ಚಿದಂಬರಂ ಅವರು, ಪರಿಸ್ಥಿತಿ ಹೀಗೇ ಮುಂದುವರೆದರೆ ಕೊರೊನಾ ಸುನಾಮಿಯೇ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕಿನ ನಿರ್ವಹಣೆ ಕುರಿತು ಕೇಂದ್ರದ ಕಾರ್ಯಚಟುವಟಿಕೆಗಳಲ್ಲಿ ಹಲವು ದೋಷಗಳಿವೆ. ಅದರಲ್ಲೂ ಕೊರೊನಾ ಲಸಿಕೆ ನಿರ್ವಹಣೆಯಲ್ಲಿ ಕೇಂದ್ರ ಸೋತಿದೆ. ಹಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ದೂರಿದ್ದಾರೆ.
ಅವೈಜ್ಞಾನಿಕ ಹಾಗೂ ಹಟಮಾರಿ ನಿಲುವಿನಿಂದ ದೇಶದಲ್ಲಿ ಪ್ರತಿದಿನ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಭೀಕರ ಪರಿಸ್ಥಿತಿ ಉಂಟಾಗಲಿದೆ. ಬಿಜೆಪಿಯ ಇಂಥ ನೀತಿಗಳಿಂದಾಗಿ ಜನರು ಬಹುದೊಡ್ಡ ಬೆಲೆ ತೆರುತ್ತಿದ್ದಾರೆ ಎಂದು ಚಿದಂಬರಂ ಟೀಕಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಎಲ್ಲರಿಗೂ ಲಸಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಅದನ್ನು ತಿರಸ್ಕರಿಸಿದೆ. ಸದ್ಯಕ್ಕೆ ಎಲ್ಲ ವಯೋಮಾನದವರಿಗೂ ಲಸಿಕೆ ನೀಡುವ ಅವಶ್ಯಕತೆಯಿದೆ ಎಂದು ವಾದಿಸಿರುವ ಅವರು, ಹೊಸ ಕೊರೊನಾ ಲಸಿಕೆಗಳ ಅನುಮೋದನೆಗೆ ತಡ ಮಾಡುತ್ತಿರುವ ಕುರಿತು ಪ್ರಶ್ನಿಸಿದ್ದಾರೆ.
ಜಗತ್ತಿನೆಲ್ಲೆಡೆ ಬಳಕೆಗೆ ಅನುಮೋದನೆ ಪಡೆದಿರುವ ಲಸಿಕೆಗಳನ್ನು ಭಾರತದಲ್ಲಿ ಅನುಮೋದನೆಗೆ ತಡೆ ಹಿಡಿಯಲಾಗುತ್ತಿದೆ. ಇದರಿಂದಲೇ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ದೂರಿದ್ದಾರೆ.