HEALTH TIPS

ಕೋವಿಡ್‌ ಸೋಂಕು ಹಳ್ಳಿಗಳಿಗೆ ಹರಡದಂತೆ ತಡೆಗಟ್ಟಿ: ಪ್ರಧಾನಿ ನರೇಂದ್ರ ಮೋದಿ

             ನವದೆಹಲಿ: 'ಕಳೆದ ವರ್ಷಕ್ಕಿಂತ ಈ ಬಾರಿ ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕದ ತೀವ್ರತೆ ಹೆಚ್ಚಾಗಿದ್ದು, ಈ ಸೋಂಕು ಹಳ್ಳಿಗಳಿಗೆ ವ್ಯಾಪಿಸದಂತೆ ಎಲ್ಲ ರೀತಿಯಿಂದಲೂ ತಡೆಯುವ ಪ್ರಯತ್ನವಾಗಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

        'ಪಂಚಾಯತ್‌ ರಾಜ್‌ ದಿವಸ್‌' ಅಂಗವಾಗಿ ಶನಿವಾರ ವರ್ಚುವಲ್‌ ಆಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಕಳೆದ ಬಾರಿ ಹಳ್ಳಿಗಳಿಗೆ ಕೊರೊನಾ ಸೋಂಕು ಹರಡದಂತೆ ಯಶಸ್ವಿಯಾಗಿ ತಡೆಯಲಾಯಿತು. ಈ ಬಾರಿ ಹಳ್ಳಿಗಳಲ್ಲಿರುವ ಸ್ಥಳೀಯ ನಾಯಕರು ಹಿಂದಿನ ವರ್ಷದ ಅನುಭವ ಮತ್ತು ಜ್ಞಾನ ಬಳಸಿಕೊಂಡು ಅದೇ ಪ್ರಯತ್ನವನ್ನು ಪುನರಾರ್ತಿಸುವ ವಿಶ್ವಾಸ ಇದೆ' ಎಂದರು. 'ಸ್ವಾಮಿತ್ವ' ಯೋಜನೆಯಡಿಯಲ್ಲಿ 4.09 ಲಕ್ಷ ಆಸ್ತಿ ಮಾಲೀಕರಿಗೆ ಇ-ಪ್ರಾಪರ್ಟಿ ಕಾರ್ಡ್‌ ವಿತರಿಸುವ ಕಾರ್ಯಕ್ರಮಕ್ಕೂ ಅವರು ಚಾಲನೆ ನೀಡಿದರು.

           'ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮೊದಲ ಜಯ ಸಾಧಿಸುವವರು ಯಾರಾದರೂ ಇದ್ದರೆ, ಅದು ಗ್ರಾಮೀಣ ಭಾರತದ ಜನರು ಮಾತ್ರ. ನನಗೆ ಹಳ್ಳಿಗಳಲ್ಲಿರುವ ನಾಯಕತ್ವದ ಬಗ್ಗೆ ಅಷ್ಟು ವಿಶ್ವಾಸವಿದೆ' ಎಂದು ಹೇಳಿದ ಪ್ರಧಾನಿ, 'ಗ್ರಾಮೀಣ ಜನರೇ ದೇಶ ಹಾಗೂ ವಿಶ್ವಕ್ಕೆ ದಾರಿ ತೋರುತ್ತಾರೆ' ಎಂದು ಶ್ಲಾಘಿಸಿದರು.

           ಇದೇ ವೇಳೆ 'ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮೀಣ ಪ್ರದೇಶದ ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ಜತೆಗೆ, ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದು ಅವರು ಕೇಳಿಕೊಂಡರು.

      ಇಂಥ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಬಡವರ್ಗದವರ ಹಸಿವು ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತ ಪಡಿತರ ವಿತರಿಸಲು ನಿರ್ಧರಿಸಿದೆ. ಇದಕ್ಕಾಗಿ ₹26 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ದೇಶದ 80 ಕೋಟಿ ಜನರು ಈ ಉಚಿತ ಪಡಿತರದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು.

          ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು. ದೇಶದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು. ಜತೆಗೆ, ದೇಶದಾದ್ಯಂತ ಸಾವಿರಾರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಆನ್‌ಲೈನ್‌ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

       ಈ ಸಂದರ್ಭದಲ್ಲಿ ಮೋದಿಯವರು 2021ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 224 ಪಂಚಾಯ್ತಿಗಳಿಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ್‌ ಪುರಸ್ಕಾರ್, 30 ಗ್ರಾಮ ಪಂಚಾಯ್ತಿಗಳಿಗೆ ನಾನಾಜಿ ದೇಶಮುಖ್‌ ಗೌರವ್ ಗ್ರಾಮ ಸಭಾ ಪುರಸ್ಕಾರ್, 2912 ಗ್ರಾಮ ಪಂಚಾಯ್ತಿಗಳಿಗೆ 'ಗ್ರಾಮ ಪಂಚಾಯತ್ ಮಕ್ಕಳ ಪಂಚಾಯತ್ ಅಭಿವೃದ್ಧಿ ಯೋಜನೆ' ಪುರಸ್ಕಾರ ಮತ್ತು 12 ರಾಜ್ಯಗಳಿಗೆ ಇ-ಪಂಚಾಯತ್ ಪುರಸ್ಕಾರ್‌ಗಳನ್ನು ಪ್ರದಾನ ಮಾಡಲಾಯಿತು.

'ಸಮಾರಂಭದಲ್ಲಿ ಒಂದು ಗುಂಡಿ ಒತ್ತುವುದರ ಮೂಲಕ ಪ್ರಧಾನ ಮಂತ್ರಿಯವರು ವಿವಿಧ ಪ್ರಶಸ್ತಿಗಳಿಗೆ ನಿಗದಿಪಡಿಸಲಾಗಿದ್ದ ₹5 ಲಕ್ಷ ದಿಂದ ₹ 50 ಲಕ್ಷದ ವರೆಗಿನ ನಗದನ್ನು ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯ್ತಿಗಳಿಗೆ ಅನುದಾನವಾಗಿ ವರ್ಗಾಯಿಸಿದರು' ಎಂದು ಪ್ರಧಾನ ಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries