ಕಾಸರಗೋಡು: ಜಿಲ್ಲೆಯ ನಾನಾ ಕಡೆ ಕೋವಿಡ್ ಲಸಿಕೆ ಕೊರತೆ ಕಂಡುಬಂದಿದ್ದು, ಇದರಿಂದ ಮೆಗಾ ವ್ಯಾಕ್ಸಿನ್ ಶಿಬಿರಗಳ ಚಟುವಟಿಕೆ ಅಯೋಮಯವಾಗಿದೆ. ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಮೆಗಾ ವ್ಯಾಕ್ಸಿನ್ ಶಿಬಿರದಲ್ಲಿ 500ಜನರಿಗಷ್ಟೆ ಟೋಕನ್ ನೀಡಲಾಗಿದ್ದು, ಉಳಿದವರಿಗೆ ಲಸಿಕೆ ನೀಡದೆ ವಾಪಾಸು ಕಳುಹಿಸಲಾಗಿದೆ. ಪೆರಿಯ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಖಾಲಿಯಾಗಿರುವ ಬಗ್ಗೆ ನೋಟೀಸು ಲಗತ್ತಿಸಲಾಗಿತ್ತು. ಉಳಿದ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಕೊರತೆಯಿಂದ ಲಸಿಕೆ ವಿತರಣಾ ಕಾರ್ಯದಲ್ಲಿ ಏರುಪೇರುಂಟಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಲಭ್ಯವಾಗಲಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಕೇರಳಕ್ಕೆ ಕೇಂದ್ರದಿಂದ 50ಲಕ್ಷ ಡೋಸ್ ವ್ಯಾಕ್ಸಿನ್‍ಗೆ ಬೇಡಿಕೆಯಿರಿಸಲಾಗಿದ್ದು, ಕಳೆದ ಮೂರು ದಿವಸಗಳಲ್ಲಿ ಮೂರು ಲಕ್ಷದಷ್ಟು ವ್ಯಾಕ್ಸಿನ್ ವಿತರಣೆಯಾಗಿದೆ. ಪ್ರತಿ ದಿನ ಎರಡುವರೆ ಲಕ್ಷ ಮಂದಿಗೆ ವ್ಯಾಕ್ಸಿನ್ ವಿತರಣೆಗೆ ಕೇರಳ ಸರ್ಕಾರ ಯೋಜನೆಯಿರಿಸಿದ್ದು, ವ್ಯಾಕ್ಸಿನ್ ಅಲಭ್ಯತೆಯಿಂದ ಮೆಗಾ ಶಿಬಿರಗಳು ಅಯೋಮಯವಾಗುತ್ತಿದೆ.
ಚಿತ್ರ ಮಾಹಿತಿ: ಕೋವಿಡ್ ವ್ಯಾಕ್ಸಿನ್ ಪಡೆಯಲು ನಗರಸಭಾ ಕಾನ್ಫರೆನ್ಸ್ ಹಾಲ್ ಸನಿಹ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು