ನವದೆಹಲಿ: ಬೇಹುಗಾರಿಕೆಯಲ್ಲಿ ತೊಡಗಿದ್ದರು ಎಂಬ ಆರೋಪದ ಮೇಲೆ ಇಸ್ರೊ ವಿಜ್ಞಾನಿ ಡಾ.ನಂಬಿ ನಾರಾಯಣನ್ ಅವರನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಭಾರಿ ಮುಜುಗರ ಹಾಗೂ ಯಾತನೆ ಆಗುವಂತೆ ಮಾಡಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ನಡೆಸಿದ ಉನ್ನತ ಮಟ್ಟದ ತನಿಖೆಯ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ.
ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿಯನ್ನು ಇತ್ತೀಚೆಗೆ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.
ಡಾ.ನಾರಾಯಣನ್ ಅವರ 'ಅಕ್ರಮ ಬಂಧನ' ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಲು ಸುಪ್ರೀಂಕೋರ್ಟ್ 2018ರ ಸೆ. 14ರಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.
ಅಲ್ಲದೇ, ನಾರಾಯಣನ್ ಅವರಿಗೆ ₹ 50 ಲಕ್ಷ ಪರಿಹಾರ ಮೊತ್ತ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ದೇಶದ ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇತರ ಮೂವರೊಂದಿಗೆ ಸೇರಿ ವಿದೇಶಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ನಾರಾಯಣನ್ ಅವರನ್ನು 1994ರಲ್ಲಿ ಬಂಧಿಸಲಾಗಿತ್ತು. ಆಗ ಅವರು, ಇಸ್ರೊದ ಕ್ರಯೋಜಿನಿಕ್ ಪ್ರಾಜೆಕ್ಟ್‌ನ ನಿರ್ದೇಶಕರಾಗಿದ್ದರು.
'ಕೇರಳ ಪೊಲೀಸರು ಇಡೀ ಪ್ರಕರಣವನ್ನು ತಿರುಚಿ, ನನ್ನ ವಿರುದ್ಧ ಆರೋಪ ಹೊರಿಸಿದ್ದಾರೆ. ನಾನು ಮಾರಾಟ ಮಾಡಲು ಕಳುವು ಮಾಡಿದ್ದೇನೆ ಎನ್ನಲಾದ ತಂತ್ರಜ್ಞಾನ ಆ ವೇಳೆ (1994ರಲ್ಲಿ) ಅಸ್ತಿತ್ವದಲ್ಲಿಯೇ ಇರಲಿಲ್ಲ' ಎಂದು ನಾರಾಯಣನ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ, ನಾರಾಯಣನ್ ಅವರನ್ನು ದೋಷಮುಕ್ತರನ್ನಾಗಿ ಮಾಡಿತ್ತು.