ನವದೆಹಲಿ: ಮಾದಕ ಪದಾರ್ಥಗಳ ವ್ಯವಹಾರ ನಡೆಸುವವರು ಮುಗ್ಧ ದುರ್ಬಲ ಸಂತ್ರಸ್ತರ ಸಾವಿಗೆ ಕಾರಣರಾಗುತ್ತಿದ್ದಾರೆ. ಕುಟುಂಬದ ಹೊಟ್ಟೆ ಹೊರೆಯುವರು ಎಂಬ ಕಾರಣಕ್ಕೆ ಇಂತಹ ಆರೋಪಿಗಳ ಶಿಕ್ಷೆಯನ್ನು ತಗ್ಗಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮುರ್ತಿ ಎಂ.ಆರ್.ಷಾ ಅವರಿದ್ದ ಪೀಠ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.
'ಭೂಗತ ಲೋಕ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಜಾಲವು ದೇಶದೊಳಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ರವಾನಿಸಿ ಅತ್ಯಂತ ಮುಗ್ಧರಾದ ಜನರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಾದಕ ವಸ್ತುಗಳ ದಾಸರಾಗುವಂತೆ ಮಾಡುತ್ತಿದೆ. ಈಚಿನ ವರ್ಷಗಳಲ್ಲಿ ಇದು ಅಪಾಯಕಾರಿಯಾಗಿ ಬೆಳೆಯುತ್ತಿದೆ. ಹೀಗಾಗಿ ಇಡೀ ಸಮಾಜದ ಹಿತವನ್ನು ನೋಡಿಕೊಂಡು ಇಂತಹ ಪ್ರಕರಣಗಳಲ್ಲಿ ಶಾಮೀಲಾದವರಿಗೆ ಶಿಕ್ಷೆ ವಿಧಿಸಬೇಕಾಗುತ್ತದೆ' ಎಂದು ಪೀಠ ಹೇಳಿತು.
ತಾನು ಒಬ್ಬನೇ ಕುಟುಂಬದ ಪೋಷಕ, ತನಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಬೇಕು ಎಂದು ಕೋರಿ ಗುರುದೇವ್ ಸಿಂಗ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಪೀಠ ಈ ತೀರ್ಪು ನೀಡಿದೆ.
'ಕೊಲೆ ಪ್ರಕರಣದಲ್ಲಾದರೆ, ಆರೋಪಿಯು ಒಬ್ಬರನ್ನೋ, ಇಬ್ಬರನ್ನೋ ಕೊಂದಿರುತ್ತಾನೆ, ಆದರೆ ಮಾದಕ ಜಾಲದಲ್ಲಿ ತೊಡಗಿಸಿಕೊಂಡವರು ಹಲವಾರು ಮುಗ್ಧ ಜನರ ಸಾವಿಗೆ ಕಾರಣರಾಗುತ್ತಿದ್ದಾರೆ, ಸಮಾಜದಲ್ಲಿ ಮಾರಣಾಂತಿಕ ದುಷ್ಪರಿಣಾಮ ಉಂಟುಮಾಡುತ್ತಿದ್ದಾರೆ' ಎಂದು ಪೀಠ ಹೇಳಿತು.