ಒಂಗೋಲ್: ರಾಮಭಕ್ತ ಹನುಮಂತನ ಜನಿಸಿದ್ದು ಎಲ್ಲಿ ಎಂಬ ಪ್ರಶ್ನೆ ಬಗ್ಗೆ ಹೊಸದಾಗಿ ಚರ್ಚೆಗಳು ಪ್ರಾರಂಭವಾಗಿವೆ.
ಟಿಟಿಡಿ ರಾಮ ನವಮಿಯ ದಿನದಂದು ಹನುಮಂತನ ಜನ್ಮಸ್ಥಳವನ್ನು ತಿರುಮಲದ ಸಪ್ತಗಿರಿಯಲ್ಲಿರುವ ಅಂಜನಾದ್ರಿ ಪರ್ವತ ಎಂದು ಘೋಷಿಸುವುದಕ್ಕೆ ಸಿದ್ಧತೆ ನಡೆಸಿದೆ. ಇದಕ್ಕೂ ಮುನ್ನ ತೆಲುಗು ಯುಗಾದಿಯ ದಿನದಂದು ಘೋಷಣೆ ಮಾಡಲು ಟಿಟಿಡಿ ಯೋಜನೆ ಹೊಂದಿತ್ತು ಆದರೆ ರಾಮಭಕ್ತ ಹನುಮನ ಜನ್ಮಸ್ಥಳವನ್ನು ಘೋಷಿಸುವುದಕ್ಕೆ ರಾಮನವಮಿಗಿಂತಲೂ ಪ್ರಶಸ್ತವಾದ ದಿನವಿಲ್ಲ ಎಂದು ಈ ರಾಮನವಮಿಯ ದಿನದಂದೇ ಘೋಷಣೆ ಮಾಡುವುದಕ್ಕೆ ಟಿಟಿಡಿ ನಿರ್ಧರಿಸಿದೆ.
ಟಿಟಿಡಿಗೆ ಇದನ್ನು ಘೋಷಣೆ ಮಾಡುವುದಕ್ಕೆ ಸಾಕ್ಷ್ಯಗಳು, ಆಧಾರವನ್ನು ನೀಡಿದ್ದು ಪ್ರಕಾಶಂ ಜಿಲ್ಲೆಯ ವಿದ್ವಾಂಸ ಡಾ. ಅನ್ನದಾನಂ ಚಿದಂಬರ ಶಾಸ್ತ್ರಿಗಳು. ಆಂಧ್ರ ವಾಂಗ್ಮಯಂಲೋ-ಹನುಮತ್ ಕಥ (ಆಂಧ್ರ ಸಾಹಿತ್ಯದಲ್ಲಿ ಹನುಮಂತನ ಕಥೆ) ಎಂಬ ವಿಷಯದಲ್ಲಿ 1972 ರಿಂದ ಸಂಶೋಧನೆ ನಡೆಸಿದ್ದಾರೆ. ಹಲವಾರು ತಾಳೆಗರಿಗಳನ್ನು, ರಾಮಾಯಣ, ಸ್ಕಂದ ಪುರಾಣ, ಬ್ರಹ್ಮಾಂಡ ಪುರಾಣ, ಪರಾಶರ ಸಂಹಿತೆ ಮುಂತಾದ ಗ್ರಂಥಗಳ ಆಧಾರದಿಂದ ಹನುಮಂತ ಹುಟ್ಟಿದ್ದು ಆಂಧ್ರಪ್ರದೇಶದ ತಿರುಮಲದಲ್ಲಿರುವ ಅಂಜನಾದ್ರಿಯಲ್ಲಿಯೇ ಎಂಬುದನ್ನು ಟಿಟಿಡಿಗೆ ಈ ವಿದ್ವಾಂಸರು ಮನವರಿಕೆ ಮಾಡಿಕೊಟ್ಟಿದ್ದಾರೆ. ಇವರ ಸಂಶೋಧನೆಯ ಆಧಾರದಲ್ಲಿಯೇ ಟಿಟಿಡಿ ಘೋಷಣೆಗೆ ಸಜ್ಜುಗೊಂಡಿದೆ.
ಹನುಮಂತನ ಜನಿಸಿದ ಸ್ಥಳದ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳಿದ್ದು, ಸ್ವಾಮಿ ಗೋಪಾಲಾನಂದ ಬಾಬ ಹನುಮ ಹುಟ್ಟಿದ್ದು ಜಾರ್ಖಂಡ್ ನಲ್ಲಿ ಎಂದು ಹೇಳಿದರೆ, ಸ್ವಾಮಿ ಗೋವಿಂದಾನಂದ ಸರಸ್ವತಿಗಳು ಕರ್ನಾಟಕದ ಹಂಪಿಯ ಬಳಿ ಇರುವ ಕಿಷ್ಕಿಂಧೆಯಲ್ಲಿ ಎಂದು ಹೇಳಿದ್ದಾರೆ. ಮತ್ತೂ ಕೆಲವರು ಹನುಮ ಹುಟ್ಟಿದ್ದು ಈಗಿನ ಗೋಕರ್ಣದ ಪ್ರದೇಶದಲ್ಲಿ ಎನ್ನುತ್ತಾರೆ. ಇವರೆಲ್ಲರ ವಾದವನ್ನು ಆಂಧ್ರಪ್ರದೇಶದ ಚಿದಂಬರ ಶಾಸ್ತ್ರಿಗಳು ಅಲ್ಲಗಳೆದಿದ್ದಾರೆ.