ಕೋಯಿಕ್ಕೋಡ್: ಶ್ರೀಧನ್ಯಾ ಸುರೇಶ್, ವಯಸ್ಸು 26. 2018ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ ಕೇರಳದ ಬುಡಕಟ್ಟು ಜನಾಂಗದ ಮೊದಲ ಮಹಿಳೆ. ಇದೀಗ ಕೋಯಿಕ್ಕೋಡ್ ಜಿಲ್ಲೆಯ ಉಪಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ವಯನಾಡು ಜಿಲ್ಲೆಯ ಪುದುತನ ಪಂಚಾಯತ್ ನಿವಾಸಿಯಾದ ಶ್ರೀಧನ್ಯಾ ಕುರಿಚಿಯಾ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರರಾಗಿದ್ದು, ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಪಡೆದಿದ್ದರು.
ಕೇರಳ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ಈ ಹೊತ್ತಿನಲ್ಲಿಯೇ ಶ್ರೀಧನ್ಯಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಸದ್ಯ ಮುಸ್ಸೋರಿಯಲ್ಲಿ ತರಬೇತಿ ಪಡೆದು ಮರಳಿರುವ ಶ್ರೀಧನ್ಯಾ ಎರಡು ವಾರಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಕೋಯಿಕ್ಕೋಡ್ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಲಿದ್ದಾರೆ .
ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿರುವ ಸರ್ಕಾರಿ ಯೋಜನೆಯೊಂದರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮಾನಂತವಾಡಿ ಉಪ ಜಿಲ್ಲಾಧಿಕಾರಿ ಶ್ರೀರಾಮ್ ಸಾಂಬಶಿವ ರಾವ್ ಅವರಿಗೆ ಜನರು ನೀಡುತ್ತಿದ್ದ ಗೌರವ ಶ್ರೀಧನ್ಯಾಳನ್ನು ಐಎಎಸ್‌ನತ್ತ ಸೆಳೆದಿತ್ತು.
ಶ್ರೀಧನ್ಯಾ ಮನದಲ್ಲಿ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂಬ ಆಸೆ ಮೊಳಕೆಯೊಡೆಯಲು ಕಾರಣ ಶ್ರೀರಾಮ್ ಸಾಂಬಶಿವ ರಾವ್ ಜತೆಗಿನ ಸಂವಾದ. ವಿಶೇಷವೇನೆಂದರೆ ರಾವ್ ಅವರು ಆಗ ಕೋಯಿಕ್ಕೋಡ್ ಜಿಲ್ಲಾಧಿಕಾರಿ ಆಗಿದ್ದು, ಶ್ರೀಧನ್ಯಾ ಉಪ ಜಿಲ್ಲಾಧಿಕಾರಿಯಾಗಲಿದ್ದಾರೆ.
ಕೋಯಿಕ್ಕೋಡ್‌ನ ದೇವಗಿರಿ ಸೇಂಟ್ ಜಾಸೆಫ್ ಕಾಲೇಜಿನಲ್ಲಿ ಪದವಿ ಪೂರೈಸಿದ ಶ್ರೀಧನ್ಯಾ, ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದರು.
ಶ್ರೀಧನ್ಯಾ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸಾದಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಆಕೆಯ ಸಾಧನೆ ಇತರರಿಗೂ ಪ್ರೇರಣೆಯಾಗಲಿ, ವಿಶೇಷವಾಗಿ ಹಿಂದುಳಿದ ಸಮುದಾಯದವರರಿಗೆ ಪ್ರೇರಣೆಯಾಗಲಿ ಎಂದು ಹೇಳಿದ್ದರು.
ಮನರೇಗಾ ಯೋಜನೆಯಡಿಯಲ್ಲಿ ದಿನಗೂಲಿ ಕೆಲಸ ಮಾಡುವರಾಗಿದ್ದಾರೆ ಶ್ರೀಧನ್ಯಾಳ ಅಪ್ಪ ಸುರೇಶ್ ಮತ್ತು ಅಮ್ಮ ಕಮಲಾ. ಈಕೆಯ ಅಕ್ಕ ಲಾಸ್ಟ್ ಗ್ರೇಡ್ ಸರ್ಕಾರಿ ಉದ್ಯೋಗಿಯಾಗಿದ್ದು ತಮ್ಮ ಪಾಲಿಟೆಕ್ನಿಕಲ್ ವಿದ್ಯಾರ್ಥಿಯಾಗಿದ್ದಾನೆ.