ಲಂಡನ್: ಕೋವಿಡ್ ಸಂಕಷ್ಟದಲ್ಲಿದ್ದ ದೇಶಗಳಿಗೆ ಭಾರತ ನೆರವಿನ ಹಸ್ತಚಾಚಿತ್ತು. ಇದೀಗ ಭಾರತ ಸಂಕಷ್ಟಕ್ಕೆ ಸಿಲುಕಿದ್ದು ನಾವು ಅವರೊಂದಿಗೆ ನಿಲ್ಲಬೇಕು ಎಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಹೇಳಿದ್ದಾರೆ.
ಬ್ರಿಟನ್ ರಾಜಕುಮಾರ ಚಾರ್ಲ್ಸ್ ತಮ್ಮ ಚಾರಿಟಿ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿರುವ ಭಾರತಕ್ಕೆ ತುರ್ತಾಗಿ ನೆರವಿನ ಹಸ್ತ ನೀಡಬೇಕಿದ್ದು ಕೋವಿಡ್ ಸಾಂಕ್ರಾಮಿಕ ರೋಗದ "ಭಯಾನಕ" ಎರಡನೇ ಅಲೆಯನ್ನು ನಿಭಾಯಿಸುವಾಗ ಭಾರತಕ್ಕೆ ಸಹಾಯ ಮಾಡುವಂತೆ ಜನರನ್ನು ಒತ್ತಾಯಿಸಿದರು.
ಬ್ರಿಟಿಷ್ ಸಿಂಹಾಸನದ 72 ವರ್ಷದ ಉತ್ತರಾಧಿಕಾರಿ ಚಾರ್ಲ್ಸ್ ಭಾರತದ ಬಗೆಗಿನ ತಮ್ಮ 'ಅಪಾರ ಪ್ರೀತಿ'ಯ ಬಗ್ಗೆ ಮಾತನಾಡಿದರು. ಒಂದು ವರ್ಷದಿಂದ ಸಾಂಕ್ರಾಮಿಕವು ಪ್ರಪಂಚದಾದ್ಯಂತದ ನಮ್ಮಲ್ಲಿ ಅನೇಕರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಈ ವಾರ, ಕೊರೋನಾ ಭಾರತದಲ್ಲಿ ಭೀಕರತೆಯನ್ನು ಸೃಷ್ಟಿಸುತ್ತಿದೆ. ಈ ದುರಂತ ದೃಶ್ಯಗಳನ್ನು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂಬ ಪ್ರಿನ್ಸ್ ಚಾರ್ಲ್ಸ್ ಹೇಳಿಕೆಯನ್ನು ಕ್ಲಾರೆನ್ಸ್ ಹೌಸ್ ಬಿಡುಗಡೆ ಮಾಡಿದೆ.
ಭಾರತೀಯ ನೆರವು ಮತ್ತು ಜಾಣ್ಮೆ ಇತರ ದೇಶಗಳಿಗೆ ಬೆಂಬಲವಾಗಿದೆ. ಭಾರತವು ಇತರರಿಗೆ ಸಹಾಯ ಮಾಡಿದಂತೆ, ಈಗ ನಾವು ಭಾರತಕ್ಕೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು. 'ನಾವು ಈ ಯುದ್ಧವನ್ನು ಗೆಲ್ಲುತ್ತೇವೆ'. ಬ್ರಿಟಿಷ್ ಏಷ್ಯನ್ ಟ್ರಸ್ಟ್, ಭಾರತದಲ್ಲಿನ ಆಸ್ಪತ್ರೆಗಳ ತುರ್ತು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲು "ಆಕ್ಸಿಜನ್ ಫಾರ್ ಇಂಡಿಯಾ" ಎಂಬ ತುರ್ತು ಅಭಿಯಾನವನ್ನು ಆರಂಭಿಸಿದೆ ಎಂದರು.
ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ 3,00,000ಕ್ಕೂ ಹೆಚ್ಚು ಹೊಸ ಹೊಸ ಕೊರೋನಾ ಪ್ರಕರಣಗಳು ವರದಿಯಾಗುತ್ತಿದೆ. ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ ಮತ್ತು ಹಲವಾರು ರಾಜ್ಯಗಳ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 3,60,960 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ 3,293 ಮಂದಿ ಕೊರೋನಾಗೆ ಬಲಿಯಾಗಿದ್ದು ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ ಎರಡು ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.