ತಿರುವನಂತಪುರ: ಕೊರೋನಾ ಹರಡುವಿಕೆ ಕಳವಳಕಾರಿಯಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ದೇವಾಲಯಗಳ ಮೇಲೆ ಹೆಚ್ಚಿನ ನಿಬಂzsನೆಗಳನ್ನು ಹೇರಿದೆ. ಏಕಕಾಲದಲ್ಲಿ ಕೇವಲ ಹತ್ತು ಜನರಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲು ನಿಯಮ ಜಾರಿಗೊಳಿಸಿದೆ. ದೇವಾಲಯಗಳು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತವೆ.
ಥರ್ಮಲ್ ಸ್ಕ್ಯಾನಿಂಗ್ ನಂತರವೇ ಭಕ್ತರನ್ನು ದೇವರ ದರ್ಶನಕ್ಕೆ ಆಲಯದೊಳಗೆ ಬಿಡಲಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಜನರಿಗೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ. ಅರ್ಪಣೆಯ ಭಾಗವಾಗಿ ಹೊರತು ಇತರ ಯಾವುದೇ ಆಹಾರವನ್ನು ಅನುಮತಿಸಲಾಗುವುದಿಲ್ಲ. ಮುಂದಿನ ಸೂಚನೆ ಬರುವವರೆಗೂ ಆನೆಗಳ ಆಲಯ ಬಲಿ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆನೆಗಳನ್ನು ದೇವಾಲಯದ ದೈನಂದಿನ ಆಚರಣೆ ಕ್ರಮಗಳಿಗೆ ಬಳಸಬಾರದೆಂದು ಸೂಚಿಸಲಾಗಿದೆ. ಸಮಾರಂಭಗಳಿಗೆ ಪೂರ್ವ ಅನುಮತಿ ಪಡೆಯಬೇಕು ಎಂದೂ ಹೇಳಲಾಗಿದೆ.
ಸಿಬ್ಬಂದಿ ಮತ್ತು ಭಕ್ತರಿಗೆ ನೈರ್ಮಲ್ಯ ಸೌಲಭ್ಯ ಕಲ್ಪಿಸಬೇಕು. ಉತ್ಸವಗಳು ಸೇರಿದಂತೆ ದೇವಾಲಯದ ಸಮಾರಂಭಗಳಿಗೆ ಗರಿಷ್ಠ 75 ಜನರಿಗೆ ಅವಕಾಶ ನೀಡಲಾಗುವುದು. ದೇವಾಲಯದ ಸಿಬ್ಬಂದಿ ಮತ್ತು ಭಕ್ತರು ಮಾಸ್ಕ್ ಧರಿಸಬೇಕು. ಸರಿಯಾದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವನ್ನು ನಿರ್ದೇಶನಗಳು ಒಳಗೊಂಡಿವೆ. ಕೊರೋನದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ನಿರ್ಬಂಧಗಳು ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.