ಡೆಹ್ರಾಡೂನ್: ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣ ವ್ಯಾಪಕವಾಗಿ ಹಬ್ಬಿರುವ ಸಂದರ್ಭದಲ್ಲಿ ಮಹಾಕುಂಭ ಮೇಳದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ 13 ಪ್ರಮುಖ ಅಖಾಡಗಳಲ್ಲಿ ಒಂದಾಗಿರುವ ಶ್ರೀ ಪಂಚಾಯತಿ ನಿರಂಜನಿ ಅಖಾಡ ನಾಳೆ ಮಹಾಕುಂಭವನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ.
ಆದರೆ ಮಹಾಕುಂಭ ಮೇಳ ನಿಲ್ಲಿಸುವ ಬಗ್ಗೆ 13 ಅಖಾಡಗಳ ಕೇಂದ್ರವಾದ ಅಖಾಡ ಪರಿಷತ್ ನಾಳೆ ಘೋಷಣೆ ಮಾಡಲಿದೆ. ನಿರಂಜನಿ ಅಖಾಡದ ಕಾರ್ಯದರ್ಶಿ ರವೀಂದ್ರ ಪುರಿ ಮಹಾರಾಜ ಮಾತನಾಡಿ, ಹರಿದ್ವಾರದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಹಲವು ಸಾಧು ಸಂತರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕುಂಭ ಮೇಳವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ.
ಏಪ್ರಿಲ್ 27ರಂದು ಶಾಹಿಸ್ನಾನ ಸಂಪ್ರದಾಯವನ್ನು ಕೆಲವು ಶ್ರೀಗಳ ಸಮ್ಮುಖದಲ್ಲಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.
ಆದರೂ ಮಹಾಕುಂಭ ಮೇಳ ನಡೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ಅಖಿಲ ಪರಿಷತ್ ನಡೆಸಲಿದ್ದು ನಾವು ಮೇಳ ನಿಲ್ಲಿಸುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಮಹಾಕುಂಭ ಮೇಳವನ್ನು ನಾಲ್ಕು ತಿಂಗಳಿನಿಂದ ಒಂದು ತಿಂಗಳಿಗೆ ಇಳಿಸಲಾಗಿದ್ದು ದೇಶದಲ್ಲಿ ಕೊರೋನಾ ತಾಂಡವವಾಡುತ್ತಿರುವಾಗ ಲಕ್ಷಗಟ್ಟಲೆ ಜನ ಸೇರುವ ಮಹಾಕುಂಭ ಮೇಳ ಬೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮೊನ್ನೆ ಏಪ್ರಿಲ್ 10ರಿಂದ 15ರವರೆಗೆ ಮಹಾಕುಂಭ ಮೇಳ ನಡೆಯುವ ಪ್ರದೇಶ ಸುತ್ತಮುತ್ತ 2 ಸಾವಿರದ 269 ಕೇಸುಗಳು ಪತ್ತೆಯಾಗಿವೆ. ಸುಮಾರು ಶೇಕಡಾ 2ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ನಿನ್ನೆ 102 ಪ್ರಕರಣಗಳು, ಮೊನ್ನೆ 525 ಪ್ರಕರಣಗಳು, ಏಪ್ರಿಲ್ 13 ರಂದು 594, ಏಪ್ರಿಲ್ 12 ರಂದು 408, ಏಪ್ರಿಲ್ 11 ರಂದು 386 ಮತ್ತು ಏಪ್ರಿಲ್ 10 ರಂದು 254 ಪ್ರಕರಣಗಳು ಪತ್ತೆಯಾಗಿವೆ.
ಮಹಾಕುಂಭದಲ್ಲಿ ಸುಮಾರು 50 ಲಕ್ಷ ಜನ ಭಾಗಿಯಾಗಿದ್ದಾರೆ.
ಹರಿದ್ವಾರದಲ್ಲಿ 30 ಸಾಧುಗಳಿಗೆ ಕೊರೋನಾ ಪಾಸಿಟಿವ್: ಹರಿದ್ವಾರದಲ್ಲಿ 30 ಸಾಧುಗಳಿಗೆ ಕೊರೋನಾ ಪಾಸಿಟಿವ್ ಬಂದಿದ್ದು ವೈದ್ಯಕೀಯ ತಂಡ ನಿರಂತರವಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುತ್ತಿದೆ. ನಾಳೆಯಿಂದ ಪ್ರಕ್ರಿಯೆ ಮತ್ತಷ್ಟು ತೀವ್ರವಾಗಲಿದೆ ಎಂದು ಹರಿದ್ವಾರ ಮುಖ್ಯ ವೈದ್ಯಾಧಿಕಾರಿ ಡಾ ಎಸ್ ಕೆ ಜಾ ತಿಳಿಸಿದ್ದಾರೆ.