ತಿರುವನಂತಪುರಂ: ಕೇರಳದಲ್ಲಿ ಕೋವಿಡ್-19ರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗವು, ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ಹಂತದ ಪ್ರಚಾರವಾದ 'ಕೊಟ್ಟಿಕಲಾಶಂ' ಅನ್ನು ನಿರ್ಬಂಧಿಸಿದೆ.
ಈ ಕುರಿತು ಕೇರಳ ರಾಜ್ಯದ ಮುಖ್ಯ ಚುನಾವಣಾ ಆಧಿಕಾರಿ ಟೀಕಾ ರಾಮ್ ಮೀನಾ ಅವರು ಸಲ್ಲಿಸಿದ್ದ ಮನವಿಗೆ ಕೇಂದ್ರ ಚುನಾವಣಾ ಆಯೋಗ ಅನಮೋದನೆ ನೀಡಿದೆ.
ಕೇರಳದಲ್ಲಿ ಏಪ್ರಿಲ್ 6ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಗೆಲ್ಲಲು ಪಣತೊಟ್ಟಿರುವ ರಾಜಕೀಯ ಪಕ್ಷಗಳು ರಾಜ್ಯದಾದ್ಯಂತ ರ‍್ಯಾಲಿ, ಬಹಿರಂಗ ಸಭೆಗಳು ನಡೆಸುತ್ತಿವೆ. ಇಲ್ಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದಲ್ಲದೆ, ಕೇರಳದಲ್ಲಿ ಚುನಾವಣಾ ಪ್ರಚಾರದ ಅಂತಿಮ ಹಂತ ಎಂದೇ ಕರೆಯುವ 'ಕೊಟ್ಟಿಕಲಾಶಂ'ನಲ್ಲಿ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಹೆಚ್ಚು ಜನರನ್ನು ಸೇರಿಸುತ್ತಾರೆ. ಜನರು ಸೇರುವುದನ್ನು ತಡೆಯುವುದಕ್ಕಾಗಿ ರಾಜ್ಯ ಚುನಾವಣಾ ಮುಖ್ಯ ಅಧಿಕಾರಿಯ ' ಕೊಟ್ಟಿಕಲಾಶಂ' ಅನ್ನು ನಿರ್ಬಂಧಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.
'ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಮನವಿಗೆ ಆಯೋಗ ಒಪ್ಪಿಗೆ ನೀಡಿದೆ' ಎಂದು ಕೇಂದ್ರ ಚುನಾವಣಾ ಆಯೋಗ, ರಾಜ್ಯಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ. ಆದರೆ ಆ ಪತ್ರದಲ್ಲಿ ಎಲ್ಲೂ ಕೊರೊನಾ ಸೋಂಕಿನ ನಿಯಂತ್ರಣದ ವಿಚಾರವನ್ನು ಉಲ್ಲೇಖಿಸಿಲ್ಲ. ಆದರೆ, ವೈರಸ್ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಆಪ್ತ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ತಿರುವನಂತಪುರಂ ಜಿಲ್ಲಾಧಿಕಾರಿ ನವಜೋತ್ ಖೋಸಾ ಅವರು ವಿಧಾನಸಭಾ ಚುನಾವಣೆಗೆ ಮುನ್ನ ರಾಜಧಾನಿ ಹಾಗೂ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ ನಡೆಯಲಿರುವ ಬೈಕ್ ರ‍್ಯಾಲಿಗಳನ್ನು ಶನಿವಾರ ಮಧ್ಯರಾತ್ರಿಯಿಂದಲೇ ಸಂಪೂರ್ಣವಾಗಿ ನಿಷೇಧಿಸಲಾಗಿದೆ.