ಮುಂಬೈ: ಕೊರೋನಾ ವೈರಸ್ ನಿಯಂತ್ರಿಸಲು ಕನಿಷ್ಠ 15 ದಿನ ಕಳೆದ ವರ್ಷದಂತೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಚಿಂತಿಸುವ ಸಮಯೇ? ಎಂದು ಬಾಂಬೆ ಹೈಕೋರ್ಟ್ ಗುರುವಾರ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರ ನ್ಯಾಯಪೀಠ 15 ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರನ್ನು ಪ್ರಶ್ನಿಸಿದೆ.
ರಾಜ್ಯ ಸರ್ಕಾರ ಪ್ರಸ್ತುತ ಜಾರಿಗೊಳಿಸಿರುವ ನಿರ್ಬಂಧಗಳು ಕಾರ್ಯನಿರ್ವಹಿಸುತ್ತಿವೆಯೇ? ತುರ್ತು ವ್ಯವಹಾರ ಹೊಂದಿರುವ ಜನರು ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಎಂದು ಕೋರ್ಟ್ ಪ್ರಶ್ನಿಸಿದೆ.
"ಕನಿಷ್ಠ 15 ದಿನಗಳವರೆಗೆ ಕಳೆದ ವರ್ಷದಂತೆ ಜನರು ಕಟ್ಟುನಿಟ್ಟಾಗಿ ಮನೆಯೊಳಗೆ ಇದ್ದರೆ, ನಾವು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ದಯವಿಟ್ಟು ನಿಮ್ಮ ಸರ್ಕಾರಕ್ಕೆ ಸಲಹೆ ನೀಡಿ' ಎಂದು ಹೈಕೋರ್ಟ್ ಹೇಳಿದೆ.
"ಈ ಸಂಬಂಧ ನಾವು ಯಾವುದೇ ಆದೇಶವನ್ನು ನೀಡುತ್ತಿಲ್ಲ, ಆದರೆ ಸರ್ಕಾರ ಕಳೆದ ವರ್ಷದಂತೆ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಪರಿಗಣಿಸಬಹುದೇ?" ಎಂದು ಹೈಕೋರ್ಟ್ ಕುಂಭಕೋಣಿಯನ್ನು ಪ್ರಶ್ನಿಸಿದೆ.
ಪ್ರಸ್ತುತ ಜಾರಿಯಲ್ಲಿರುವುದು ಸಹ ಲಾಕ್‌ಡೌನ್ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ. ಅಲ್ಲದೆ ಏಪ್ರಿಲ್ 30ರ ಆಚೆಗೆ 15 ದಿನಗಳವರೆಗೆ ರಾಜ್ಯದಲ್ಲಿ ನಿರ್ಬಂಧಗಳನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.