ನವದೆಹಲಿ: 1 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ ಮತ್ತು ಮುಂದಿನ 3 ದಿನಗಳಲ್ಲಿ ಅವು 20 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ರಾಜ್ಯದಲ್ಲಿ ಲಸಿಕೆಗಳು 'ಮುಗಿದಿವೆ' ಮತ್ತು ವ್ಯಾಕ್ಸಿನೇಶನ್ ಚಾಲನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಕೆಲವು ಮಹಾರಾಷ್ಟ್ರ ರಾಜ್ಯ ಸರ್ಕಾರಿ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು, ಅರ್ಹ ಜನಸಂಖ್ಯೆಗನುಗುಣವಾಗಿ ಬಾಕಿ 7,49,960 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯದಲ್ಲಿ ಲಭ್ಯವಿದೆ ಎಂದು ಸಚಿವಾಲಯ ಹೇಳಿದೆ.
'ಏಪ್ರಿಲ್ 29 ರಂದು (ಬೆಳಿಗ್ಗೆ 8 ಗಂಟೆಗೆ) ಮಹಾರಾಷ್ಟ್ರವು ಪಡೆದಿರುವ ಒಟ್ಟು ಕೋವಿಡ್ ಲಸಿಕೆ ಪ್ರಮಾಣ 1,63,62,470 ಡೋಸ್. ಇದರಲ್ಲಿ, ತ್ಯಾಜ್ಯ (ಶೇ 0.22) ಸೇರಿದಂತೆ ಒಟ್ಟು 1,56,12,510 ಡೋಸ್‌ಗಳನ್ನು ಈಗಾಗಲೇ ಬಳಸಲಾಗಿದ್ದು, ಉಳಿದ ಜನಸಂಖ್ಯೆಗನುಗುಣವಾಗಿ 7,49,960 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳಲ್ಲಿ ಲಭ್ಯವಿದೆ' ಎಂದು ಸಚಿವಾಲಯ ತಿಳಿಸಿದೆ.
ಭಾರತ ಸರ್ಕಾರ ಇಲ್ಲಿಯವರೆಗೆ ಸುಮಾರು 16.16 ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದರಲ್ಲಿ ತ್ಯಾಜ್ಯ ಸೇರಿದಂತೆ ಒಟ್ಟು 15,10,77,933 ಡೋಸ್‌ಗಳನ್ನು ಬಳಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
'1 ಕೋಟಿಗಿಂತ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳು (1,06,08,207) ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಮುಂದಿನ ಮೂರು ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು (20,48,890) ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ' ಎಂದು ಸಚಿವಾಲಯ ಹೇಳಿದೆ.
ಕೋವಿಡ್-19 ಲಸಿಕೆ ಅಭಿಯಾನದ 3ನೇ ಹಂತವು 2021 ಮೇ 1 ರಿಂದ ಜಾರಿಗೆ ಬರಲಿದೆ. ಲಸಿಕೆ ಪಡೆಯಲು ಜನರ ನೋಂದಣಿ ಕಾರ್ಯ ಬುಧವಾರದಿಂದ ಪ್ರಾರಂಭವಾಗಿದ್ದು, ಸಂಭಾವ್ಯ ಫಲಾನುಭವಿಗಳು ನೇರವಾಗಿ ಕೋವಿನ್ ಪೋರ್ಟಲ್ cowin.gov.in ನಲ್ಲಿ ಅಥವಾ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು.