ತಿರುವನಂತಪುರಂ : ಅಯ್ಯಪ್ಪ ಸ್ವಾಮಿ ಭಕ್ತರು ಹೂವಿಗೆ ಅರ್ಹರು, ಲಾಠಿಗಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಆಡಳಿತದ ಕುರಿತು ಪ್ರಧಾನಿ ಮೋದಿ ಟೀಕಿಸಿದರು. ಕೇರಳದ ಜನರು ಬಿಜೆಪಿಯ ಅಭಿವೃದ್ದಿ ಕಾರ್ಯಸೂಚಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಶುಕ್ರವಾರ ಪತನಂತಿಟ್ಟದಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ದಬ್ಬಾಳಿಕೆ ವಿರುದ್ಧ ಜನರು ತಮ್ಮ ದನಿ ಎತ್ತುವ ಮೂಲಕ ಆಡಳಿತದಲ್ಲಿರುವವರಿಗೆ ವಿಶೇಷ ಸಂದೇಶ ನೀಡುತ್ತಾರೆ. ನಾನು ಕೇರಳದಲ್ಲಿ ಅದೇ ಮನೋಭಾವವನ್ನು ಕಾಣುತ್ತಿದ್ದೇನೆ. ಜನರು ಬಿಜೆಪಿಯ ಕೆಲಸಗಳನ್ನು ನೋಡುತ್ತಿದ್ದಾರೆ. ಹೀಗಾಗೇ ನಮ್ಮ ಮೇಲೆ ವಿಶ್ವಾಸ ಅವರಿಗಿದೆ" ಎಂದು ಹೇಳಿದರು.
ರಾಜಕೀಯಕ್ಕೆ ಉತ್ತಮ ಶಿಕ್ಷಣ ಪಡೆದವರನ್ನು ಕೇಸರಿ ಪಕ್ಷ ಒಳಗೊಳ್ಳುತ್ತಿದೆ ಎಂದು ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರನ್ನುದ್ದೇಶಿಸಿ ಮಾತನಾಡಿ, "ಬಿಜೆಪಿಯಲ್ಲಿ ಶ್ರೀಧರನ್ ಅವರ ಉಪಸ್ಥಿತಿ ಪಕ್ಷಕ್ಕೆ ಒಂದು ಘನತೆ ತಂದಿದೆ. ಇ ಶ್ರೀಧರನ್ ಅವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಸಮಾಜಕ್ಕೆ ಸೇವೆ ಸಲ್ಲಿಸಲು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಹೇಳಿದರು.
ಆಡಳಿತ ಎಲ್‌ಡಿಎಪ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷಗಳನ್ನು ಟೀಕಿಸಿದ ಅವರು, ಕೇರಳದಲ್ಲಿನ ಈ ಮೈತ್ರಿ ಕುಟುಂಬ ರಾಜಕಾರಣವನ್ನಷ್ಟೇ ಗಮನದಲ್ಲಿಟ್ಟುಕೊಂಡು ಇನ್ನೆಲ್ಲವನ್ನೂ ಬದಿಗೆ ಸರಿಸುತ್ತಿದೆ ಎಂದು ಆರೋಪಿಸಿದರು.