ನವದೆಹಲಿ: ದೇಶಾದ್ಯಂತ ಆರಂಭವಾಗಿರುವ “ಲಸಿಕೆ ಉತ್ಸವ’ವು (ಟೀಕಾ ಉತ್ಸವ್) ಕೊರೊನಾ ವಿರುದ್ಧದ ಎರಡನೇ ದೊಡ್ಡ ಯುದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏ.11ರಿಂದ 14ರವರೆಗೆ ನಡೆಯಲಿರುವ ಉತ್ಸವದ ಮೊದಲ ದಿನವಾದ ಭಾನುವಾರ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಪ್ರಧಾನಿ ಮೋದಿ ದೇಶವಾಸಿಗಳಿಗೆ ಲಸಿಕೆ ಸ್ವೀಕರಿಸುವಂತೆ ಉತ್ತೇಜನ ನೀಡಿದ್ದಾರೆ. ಅಲ್ಲದೆ, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 4 ಅಂಶಗಳ ಸಲಹೆಗಳನ್ನೂ ನೀಡಿದ್ದಾರೆ. “ಪ್ರತಿಯೊಬ್ಬರೂ ಇತರರಿಗೆ ಲಸಿಕೆ ಹಾಕಿಸಲು ನೆರವಾಗಿ, ಪ್ರತಿಯೊಬ್ಬರೂ ಮತ್ತೂಬ್ಬರ ಚಿಕಿತ್ಸೆಗೆ ಸಹಾಯ ಮಾಡಿ, ಪ್ರತಿಯೊಬ್ಬರೂ ಮತ್ತೂಬ್ಬರನ್ನು ರಕ್ಷಿಸಿ, ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸೃಷ್ಟಿಗೆ ನೀವೇ ನೇತೃತ್ವ ವಹಿಸಿ’ ಎಂದು ಕರೆ ಕೊಟ್ಟಿದ್ದಾರೆ.
ಮೈಕ್ರೋ ಕಂಟೈನ್ಮೆಂಟ್ ವಲಯಗಳ ಬಗ್ಗೆ ನಾವು ಎಷ್ಟು ಎಚ್ಚರಿಕೆ ಹೊಂದಿದ್ದೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸು ನಿಂತಿದೆ ಎಂದ ಮೋದಿ, ಲಸಿಕೆಯ ಒಂದೇ ಒಂದು ಡೋಸ್ ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಈ 4 ದಿನಗಳಲ್ಲಿ ಲಸಿಕೆಗೆ ಟಾರ್ಗೆಟ್ ಹಾಕಿಕೊಂಡು ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆ ಒದಗಿಸಬೇಕು ಎಂದೂ ಅವರು ಕರೆ ನೀಡಿದ್ದಾರೆ.
ನಾಲ್ಕು ಅಂಶಗಳ ಸಲಹೆ
1. ಪ್ರತಿಯೊಬ್ಬರೂ- ಲಸಿಕೆ ಹಾಕಿಸಿ
ಅನಕ್ಷರಸ್ಥರು, ಹಿರಿಯ ನಾಗರಿಕರು ಸೇರಿದಂತೆ ಯಾರಿಗೆ ತಾವಾಗಿಯೇ ಹೊರಹೋಗಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೋ, ಅಂಥವರಿಗೆ ಪ್ರತಿಯೊಬ್ಬರೂ ನೆರವಾಗಬೇಕು.
2. ಪ್ರತಿಯೊಬ್ಬರೂ- ಚಿಕಿತ್ಸೆಗೆ ನೆರವಾಗಿ
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಸೂಕ್ತ ಸಂಪನ್ಮೂಲಗಳಿಲ್ಲದ ಅಥವಾ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲದ ಜನರಿಗೆ ಚಿಕಿತ್ಸೆ ಕೊಡಿಸಲು ನೆರವು ನೀಡಬೇಕು.
3. ಪ್ರತಿಯೊಬ್ಬರೂ- ರಕ್ಷಿಸಿ
ಎಲ್ಲರೂ ಕೂಡ “ನಾನು ಮಾಸ್ಕ್ ಧರಿಸಬೇಕು. ಆ ಮೂಲಕ ನಾನು ನನ್ನನ್ನು ಮಾತ್ರವಲ್ಲದೇ, ಇತರರ ಜೀವವನ್ನೂ ರಕ್ಷಿಸುತ್ತೇನೆ’ ಎಂದು ಶಪಥ ಮಾಡಿಕೊಳ್ಳಬೇಕು.
4. ಮೈಕ್ರೋ ಕಂಟೈನ್ಮೆಂಟ್ ವಲಯದ ಸೃಷ್ಟಿ
ಕುಟುಂಬ ಸದಸ್ಯರು ಮತ್ತು ಸಮುದಾಯದ ಸದಸ್ಯರು ಒಂದು ಪಾಸಿಟಿವ್ ಕೇಸ್ ಬಂದರೂ “ಮೈಕ್ರೋ ಕಂಟೈನ್ಮೆಂಟ್ ವಲಯ’ವನ್ನು ಸೃಷ್ಟಿಸಿಕೊಳ್ಳಬೇಕು. ಭಾರತದಂತಹ ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಸೋಂಕಿಗೆ ಕಡಿವಾಣ ಹಾಕಲು ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಲಸಿಕೋತ್ಸವಕ್ಕೆ ಜನರ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿಯ ಆಶಯದಂತೆ ಜಾರಿಗೊಂಡಿರುವ ನಾಲ್ಕು ದಿನಗಳ ಲಸಿಕೋತ್ಸವ ಕಾರ್ಯಕ್ರಮಕ್ಕೆ ಜನಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೊರೊನಾ ಸಾಂಕ್ರಾಮಿಕ ಭೀತಿಯಿಂದ ಇಡೀ ದೇಶದ ಜನತೆ ನರಳುತ್ತಿರುವಾಗಲೇ ಪ್ರಧಾನಿಯವರು ಲಸಿಕೆ ಅಭಿಯಾನವನ್ನು ಮತ್ತೂಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ರತಿ ರಾಜ್ಯದಲ್ಲೂ ಲಸಿಕೆ ಉತ್ಸವವನ್ನು ನಡೆಸುವುದರಿಂದ ಅನೇಕರಿಗೆ ಲಸಿಕೆ ಸಿಗುವಂತಾಗುತ್ತದೆ. ಈ ಮೂಲಕ ಕೊರೊನಾ ಸೋಂಕನ್ನು ನಿವಾರಿಸಲು ಸಹಾಯವಾಗುತ್ತದೆ ಎಂದು ದಕ್ಷಿಣ ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿನ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಸೇರಿದ್ದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುಮಾರು ಲಸಿಕೋತ್ಸವಕ್ಕಾಗಿ ಸುಮಾರು 6 ಸಾವಿರ ಹೆಚ್ಚುವರಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹೆಚ್ಚೆಚ್ಚು ಜನರಿಗೆ ಲಸಿಕೆ ತಲುಪಿಸುವ ಉದ್ದೇಶದಿಂದ 6 ಸಾವಿರ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಜನರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದು ಎಂದರು.
ಕೊರೊನಾ ಪ್ರಕರಣಗಳು ಅತಿ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಹೆಚ್ಚೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಲಸಿಕೋತ್ಸವದ ಮೊದಲ ದಿನವೇ 1 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.