ನವದೆಹಲಿ : ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ನಡುವೆಯೇ ಕುಂಭಮೇಳದಲ್ಲಿ ಲಕ್ಷಾಂತರ ಜನರು ಗುಂಪುಗೂಡಿ ಭಾಗಿಯಾಗುತ್ತಿರುವುದು ತೀವ್ರ ಟೀಕೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕುಂಭಮೇಳ ಆಚರಣೆಗೆ ಎರಡು ವಾರಗಳ ಮುನ್ನ, ಇಂದೇ ಅಂತ್ಯ ಹಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕುಂಭಮೇಳದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ, ಯಾವುದೇ ಕೋವಿಡ್ ನಿಯಮಾವಳಿಗಳನ್ನು ಪಾಲಿಸದೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಕೊಳ್ಳುತ್ತಿದ್ದಾರೆ. ಗಂಗಾನದಿಯ ತೀರದಲ್ಲಿ ಪವಿತ್ರ ಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಏರಿಕೆಯ ಭೀತಿ ಮೂಡಿಸಿದೆ. ಉತ್ತರಾಖಂಡದಲ್ಲಿ ಸುಮಾರು ಎರಡು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದಕ್ಕೆ ಕುಂಭ ಮೇಳವೇ ಕಾರಣ ಎಂದು ಆರೋಪಿಸಲಾಗಿದೆ.
ಬುಧವಾರ ಬೆಳಿಗ್ಗೆ ಸಾಧುಗಳು ಮತ್ತು ಭಕ್ತರು ಹರ್ ಕಿ ಪೌರಿ ಮುಖ್ಯ ಘಟ್ಟದಲ್ಲಿ ಮೂರನೇ ಪ್ರಮುಖ ಸ್ನಾನವಾದ 'ಶಹಿ ಸ್ನಾನ್' ಕೈಗೊಂಡಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೆ ಕುಂಭದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾದ ಬುಧವಾರ 9,43,452 ಮಂದಿ ಗಂಗಾ ನದಿಯಲ್ಲಿ ಮುಳುಗೆದ್ದಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕುಂಭ ಮೇಳಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಧಾರ್ಮಿಕ ಮುಖಂಡರ ಜತೆ ಸಭೆ ನಡೆಸಿದ್ದು, ಇನ್ನೂ ಎರಡು ವಾರ ನಡೆಯಲಿರುವ ಕುಂಭಮೇಳವನ್ನು ಬುಧವಾರವೇ ಅಂತ್ಯಗೊಳಿಸುವ ಬಗ್ಗೆ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆಚರಣೆ ಪ್ರಕಾರ ಕುಂಭಮೇಳವು ಏಪ್ರಿಲ್ 27ರವರೆಗೆ ನಡೆಯಲಿದೆ.
ಜನಜಂಗುಳಿ ಇಲ್ಲದ ಘಾಟ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡದ ಜನರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಮುಖ್ಯ ಘಾಟ್‌ಗಳಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಗುಂಜ್ಯಾಲ್ ತಿಳಿಸಿದ್ದಾರೆ.