ನವದೆಹಲಿ: ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಎಲ್ಲರೂ ಒಂದೇ.. ಎಂಬುದನ್ನು ಸಾಬೀತು ಪಡಿಸಲು ಹಾಗೂ ಜನರಿಗೂ ಕಾನೂನಿನ ಮೇಲೆ ವಿಶ್ವಾಸ ಮೂಡಿಸಲು ಈ ಪೊಲೀಸರು ಪ್ರಧಾನಿಯನ್ನೂ ಬಿಡದೆ ದಂಡ ವಿಧಿಸಿದ್ದಾರೆ. ಅಷ್ಟಕ್ಕೂ ಪ್ರಧಾನಿ ತನ್ನ ಬರ್ತ್ಡೇ ಆಚರಣೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದೇ ಇಂಥದ್ದೊಂದು ಕಾನೂನುಕ್ರಮಕ್ಕೆ ಕಾರಣ.
ಅಂದಹಾಗೆ ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದ್ದು ನಾರ್ವೆಯ ಪ್ರಧಾನಿ ಅರ್ನಾ ಸೋಲ್ಬರ್ಗ್. ಕೋವಿಡ್ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿಗೆ 20,000 ನಾರ್ವೆಯನ್ ಕ್ರೌನ್ಸ್ (2,352 ಡಾಲರ್) ದಂಡ ವಿಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸ್ ವರಿಷ್ಠ ಓಲ್ ಸೇವರುಡ್ ತಿಳಿಸಿದ್ದಾರೆ.
ಪ್ರಧಾನಿ ಅರ್ನಾ ಫೆಬ್ರವರಿಯಲ್ಲಿ ನಡೆದ ತಮ್ಮ 60ನೇ ಜನ್ಮದಿನಾಚರಣೆ ವೇಳೆ ಕುಟುಂಬದ 13 ಮಂದಿಯೊಂದಿಗೆ ಸಂಭ್ರಮ ಆಚರಿಸಿ, ದೈಹಿಕ ಅಂತರವನ್ನೂ ಪಾಲಿಸದೆ ಕೋವಿಡ್ ನಿಯಮ ಉಲ್ಲಂಘಿಸಿದ್ದರು. ಹತ್ತಕ್ಕಿಂತ ಹೆಚ್ಚು ಜನ ಸೇರಬಾರದು ಎಂಬ ನಿಯಮವಿದ್ದರೂ 13 ಜನ ಒಂದೆಡೆ ಸೇರಿದ್ದರು. ಹೀಗೆ ನಿಯಮ ಉಲ್ಲಂಘಿಸಿದ್ದಕ್ಕೆ ಅವರು ಅಂದೇ ಕ್ಷಮೆಯಾಚಿಸಿದ್ದರೂ ಇವರ ವಿರುದ್ಧ ಪೊಲೀಸರು ಕ್ರಮಕೈಗೊಂಡು ದಂಡ ವಿಧಿಸಿರಲಿಲ್ಲ.