ನಾಗ್ಪುರ : ಕುಟುಂಬದ ಸದಸ್ಯರು ಅಥವಾ ತಮಗೆ ಹತ್ತಿರವಾಗಿರುವವರ ಅನುಪಸ್ಥಿತಿಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೋಗಿಗಳು ಕುಟುಂಬದ ಸದಸ್ಯರ ಜತೆಗೆ ನಿಯಮಿತವಾಗಿ ಸಮಾಲೋಚನೆ ನಡೆಸುವುದು ಅಗತ್ಯ. ಇದು ಚಿಕಿತ್ಸೆಯ ಭಾಗವಾಗಬೇಕು. ಇದರಿಂದ, ರೋಗಿಯ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದು ವಿವರಿಸಿದ್ದಾರೆ.
'ಕೋವಿಡ್-19 ರೋಗಿಯನ್ನು ಭೇಟಿಯಾಗಲು ಕುಟುಂಬದ ಆಪ್ತ ಸದಸ್ಯರಿಗೆ ಅವಕಾಶ ನೀಡದಿರುವುದು ಕ್ರೂರತನ ಮತ್ತು ಅಮಾನವೀಯ. ರೋಗಿಯು ಒಂಟಿತನ ಅನುಭವಿಸುತ್ತಿದ್ದಾಗ ಕುಟುಂಬದ ಸದಸ್ಯರು ಅಥವಾ ಆಪ್ತರನ್ನು ನೋಡದಿದ್ದರೆ ಚೇತರಿಕೆಗೊಳ್ಳುವ ಆಶಾಭಾವ ಕಳೆದುಕೊಳ್ಳುತ್ತಾನೆ' ಎಂದು ವರ್ಧಾದಲ್ಲಿರುವ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಇಂದ್ರಜೀತ್ ಖಂಡೇಕರ್ ತಿಳಿಸಿದ್ದಾರೆ.
'ಕೋವಿಡ್ ರೋಗಿಯ ಜತೆ ಆಪ್ತ ಸಂಬಂಧಿಕರು ಹಾಗೂ ವೈದ್ಯರು ಮತ್ತು ನರ್ಸ್‌ಗಳ ಜತೆ ರೋಗಿಯ ಕುಟುಂಬದವರು ನಿರಂತರ ಸಮಾಲೋಚನೆ ನಡೆಸುವುದು ಚಿಕಿತ್ಸೆಯ ಭಾಗವಾಗಬೇಕು. ಮಾಸ್ಕ್ ಧರಿಸಿಕೊಂಡು ರೋಗಿ ಜತೆ ಇರಲು ಸಂಬಂಧಿಕರಿಗೆ ಅವಕಾಶ ಕಲ್ಪಿಸಬೇಕು' ಎಂದು ಹೇಳಿದ್ದಾರೆ.
'ಕೆಲವು ರೋಗಿಗಳಿಗೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಇಂತಹವರಿಗೆ ನಿರಂತರ ಸಹಾಯ ಅಗತ್ಯವಾಗುತ್ತದೆ. ಅಂತವರಿಗೆ ಕುಟುಂಬದ ಸದಸ್ಯರಿಂದ ಮಾತ್ರ ನೆರವು ದೊರೆಯಲು ಸಾಧ್ಯ. ಎಲ್ಲವನ್ನೂ ಆರೋಗ್ಯ ಕಾರ್ಯಕರ್ತರಿಂದ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.