ನವದೆಹಲಿ: ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಹೋಮ್ ಐಸೊಲೇಷನ್ ಗೆ ಒಳಗಾಗುವವರಿಗೆ ಆರೋಗ್ಯ ಸಚಿವಾಲಯ ಏ.29 ರಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರೆಮ್ಡಿಸಿವಿರ್ ಚುಚ್ಚುಮದ್ದನ್ನು ಮನೆಲ್ಲಿಟ್ಟುಕೊಳ್ಳುವುದಾಗಲೀ, ಮನೆಯಲ್ಲೇ ಚುಚ್ಚು ಮದ್ದನ್ನು ಪಡೆಯುವುದಾಗಲೀ ಮಾಡಬಾರದು ಎಂದು ಎಚ್ಚರಿಸಿರುವ ಸಚಿವಾಲಯ ಆಸ್ಪತ್ರೆಯಲ್ಲೇ ಪಡೆಯಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ರೋಗಲಕ್ಷಣಗಳು 7 ದಿನಗಳಿಗಿಂತಲೂ ಹೆಚ್ಚು ದಿನ ಇದ್ದಲ್ಲಿ, ಅಥವಾ ಪ್ರಾರಂಭಿಕ ರೋಗಲಕ್ಷಣಗಳಿದ್ದಲ್ಲಿ ಓರಲ್ ಸ್ಟಿರಾಯ್ಡ್ ಗಳ ಬಳಕೆ ಮಾಡಬಾರದೆಂದು ಮಾರ್ಗಸೂಚಿಯಲ್ಲಿದೆ. 7ಕ್ಕೂ ಹೆಚ್ಚಿನ ದಿನಗಳಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ ವೈದ್ಯರಿಂದ ಚಿಕಿತ್ಸೆ ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಗಳ ಇನ್ನಿತರ ವಿವರ ಹೀಗಿದೆ.
ಹಿರಿಯ ನಾಗರಿಕರು, ಒತ್ತಡ, ಮಧುಮೇಹ, ಹೃದಯ ಸಮಸ್ಯೆ, ಶ್ವಾಸಕೋಶ ಅಥವಾ ಲಿವರ್ ಅಥವಾ ಕಿಡ್ನಿ ರೋಗ ಸೇರಿದಂತೆ ಒಂದಕ್ಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆ ಇರುವವರು ವೈದ್ಯರು, ಆರೋಗ್ಯ ಅಧಿಕಾರಿಯ ಸಲಹೆ ಪಡೆದೇ ಹೋಮ್ ಐಸೊಲೇಷನ್ ನಲ್ಲಿರುವುದಕ್ಕೆ ಅವಕಾಶವಿದೆ.ಆಕ್ಸಿಜನ್ ಪ್ರಮಾಣ ಕಡಿಮೆಯಾಗುವುದು, ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ ರೋಗಿಗಳು ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನಲ್ಲಿ ಬಾಯಿಮುಕ್ಕಳಿಸಬಹುದಾಗಿದೆ. ಪ್ಯಾರೆಸಿಟಮಾಲ್ 650 ಎಂಜಿ ಮಾತ್ರೆ ದಿನಕ್ಕೆ ನಾಲ್ಕು ಬಾರಿ ತೆಗೆದುಕೊಂಡರೂ ಜ್ವರ ಕಡಿಮೆಯಾಗದೇ ಇದ್ದಲ್ಲಿ, ವೈದ್ಯರನ್ನು ಅಗತ್ಯವಾಗಿ ಸಂಪರ್ಕಿಸಬೇಕು. ಜ್ವರ ಹಾಗೂ ಕೆಮ್ಮು 5 ದಿನಗಳಿಗಿಂತ ಹೆಚ್ಚಿನ ಕಾಲ ಇದ್ದಲ್ಲಿ, ಇನ್ಹೇಲರ್ ಗಳ ಮೂಲಕ ಇನ್ಹಲೇಷನ್ ಬುಡೆಸೊನೈಡ್ ಔಷಧಗಳನ್ನು (ದಿನಕ್ಕೆ ಎರಡು ಬಾರಿ 800ಎಂಸಿಜಿ ಪ್ರಮಾಣದಲ್ಲಿ) ನೀಡಬೇಕಾಗುತ್ತದೆ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ ವೈದ್ಯಕೀಯ ವೃತ್ತಿಯಲ್ಲಿರುವವರು ನಿರ್ಧರಿಸಿದ ಬಳಿಕವಷ್ಟೇ ಆಸ್ಪತ್ರೆಯಲ್ಲಿ ಮಾತ್ರ ರೆಮ್ಡಿಸಿವಿರ್ ಔಷಧವನ್ನು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.