ನವದಹೆಲಿ: ಎಷ್ಟೇ ಹೇಳಿದರೂ ಜನರು ಕರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಜನರಲ್ಲಿ ಸಮರ್ಪಕ ರೀತಿಯಲ್ಲಿ ಜಾಗೃತಿ ಮೂಡಿಸಲು ಇಲ್ಲೊಂದು ಕಡೆ ಯಮರಾಜನ ಮೊರೆ ಹೋಗಲಾಗಿದೆ. ಹೀಗಾಗಿ ಸ್ವತಃ ಯಮರಾಜನೇ ಬೀದಿಗಳಿದು ಜಾಗೃತಿ ಮೂಡಿಸಲಾರಂಭಿಸಿದ್ದಾನೆ.
ಹೀಗೆ ವಿನೂತನ ರೀತಿಯಲ್ಲಿ ಕರೊನಾ ಕುರಿತು ಜಾಗೃತಿಯನ್ನು ಉತ್ತರಪ್ರದೇಶದ ಮೊರದಾಬಾದ್ನಲ್ಲಿ ಮಾಡಲಾಗುತ್ತಿದೆ. ಇಲ್ಲಿ ಜನರು ಕರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹೆಚ್ಚಾದ್ದರಿಂದ ಈ ಉಪಾಯ ಮಾಡಲಾಗಿದೆ.
ಕಲಾವಿದನೊಬ್ಬನಿಗೆ ಯಮರಾಜನ ವೇಷ ತೊಡಿಸಿ, ಯಮನ ವಾಹನ ಕೋಣದ ಸಮೇತ ಆತನನ್ನು ಬೀದಿಗಿಳಿಸಿ ಜಾಗೃತಿ ಮೂಡಿಸುವಂತೆ ಮಾಡಲಾಗಿದೆ. ಮಾತ್ರವಲ್ಲ ಈ ಯಮರಾಜನ ಕೈಗೆ ಪ್ಲಕಾರ್ಡ್ವೊಂದನ್ನೂ ಕೊಡಲಾಗಿದೆ. ಅದರಲ್ಲಿ, 'ಭೂವಾಸಿಗಳೇ.. ದಯವಿಟ್ಟು ನಮ್ಮ ವರ್ಕ್ಲೋಡ್ ಹೆಚ್ಚಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಅಂತರ ಕಾಪಾಡಿಕೊಳ್ಳಿ.. ಇಲ್ಲದಿದ್ದರೆ ನಾನೇ ಬರುತ್ತೇನೆ, ನಾನೇ ಯಮ..' ಎಂಬುದನ್ನು ಅದರ ಮೇಲೆ ಬರೆಸಲಾಗಿದೆ. ಒಟ್ಟಿನಲ್ಲಿ ಜನರಿಗೆ ಹೆದರಿಸಿಯಾದರೂ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.