ತಿರುವನಂತಪುರಂ: ಕೇರಳದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಯುವಕನಿಗೆ ತಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟ ಮುಸ್ಲಿಂ ಕುಟುಂಬ ಎಂಬ ತಲೆಬರಹದಡಿಯಲ್ಲಿ ಫೋಟೊವೊಂದು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದ್ದು, ಈ ಕುರಿತಾದಂತೆ ಸತ್ಯಾಂಶವನ್ನು altnews.in ವರದಿ ಮಾಡಿದೆ.
ಹಲವಾರು ಸಾಮಾಜಿಕ ತಾಣ ಖಾತೆಗಳಲ್ಲಿ ಬುರ್ಖಾ ಧರಿಸಿದ ಮಹಿಳೆ ಹಾಗೂ ವ್ಯಕ್ತಿಯೋರ್ವರು ಯುವತಿಗೆ ಆಶೀರ್ವಾದ ಮಾಡಿದ ಫೊಟೊವೊಂದು ಹರಿದಾಡುತ್ತಿತ್ತು. "ಹಿಂದೂಗಳ ಮನೆಯಲ್ಲಿ ನಮ್ಮ ಮಗಳು ಸುರಕ್ಷಿತಳಾಗಿರುತ್ತಾಳೆ ಎಂದು ಕೇರಳದ ಮುಸ್ಲಿಂ ದಂಪತಿಯು ತನ್ನ ಮಗಳನ್ನು ಹಿಂದೂ ಯುವಕನಿಗೆ ನೀಡಿ ವಿವಾಹ ನೆರವೇರಿಸಿದ್ದಾರೆ" ಎಂಬ ತಲೆಬರಹದೊಂದಿಗೆ ಫೋಟೊ ಶೇರ್ ಆಗುತ್ತಿತ್ತು.
ಆದರೆ ಇದರ ಸತ್ಯಾವಸ್ಥೆ ಏನೆಂದರೆ, ಫೆಬ್ರವರಿ 19, 2020ರಂದು ಈ ಫೋಟೊವನ್ನು ಪ್ರಕಟಿಸಲಾಗಿದೆ. ಮುಸ್ಲಿಂ ದಂಪತಿಗಳಾದ ಖದೀಜಾ ಮತ್ತು ಅಬ್ದುಲ್ಲಾ ದಂಪತಿಗಳು 10 ವರ್ಷದ ಹಿಂದೂ ಧರ್ಮಕ್ಕೆ ಸೇರಿದ ರಾಜೇಶ್ವರಿ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು. ಆಕೆಯನ್ನು ಅವಳ ಸಂಪ್ರದಾಯದಂತೆಯೇ ಬೆಳೆಯಲು ಬಿಟ್ಟ ದಂಪತಿ ಆಕೆ 22 ವರ್ಷದವಳಾಗಿದ್ದ ವೇಳೆ ಹಿಂದೂ ಸಂಪ್ರದಾಯದಂತೆ ಹಿಂದೂ ಯುವಕನೊಂದಿಗೆ ವಿವಾಹ ನೆರವೇರಿಸಿಕೊಟ್ಟಿದ್ದರು.
ಈ ಮದುವೆಯ ಕುರಿತಾದಂತೆ timesofindia.com ನಲ್ಲೂ ವರದಿ ಪ್ರಕಟಿಸಲಾಗಿತ್ತು. ರಾಜೇಶ್ವರಿಯು ವಿಷ್ಣು ಪ್ರಸಾದ್ ಎಂಬಾತನನ್ನು ವಿವಾಹವಾಗಿದ್ದು, ದೇವಸ್ಥಾನದಲ್ಲಿ ವಿವಾಹ ನಡೆಸಿದರೆ ಮುಸ್ಲಿಂ ದಂಪತಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿದು ಅಬ್ದುಲ್ಲಾ-ಖದೀಜಾ ದಂಪತಿ ಚಿಂತಾಕ್ರಾಂತರಾಗಿದ್ದರು. ಬಳಿಕ ಕಾಞಂಗಾಡ್ ನ ಮಣಿಯೊಟ್ಟು ದೇವಾಲಯದಲ್ಲಿ ಮುಸ್ಲಿಮರಿಗೆ ಪ್ರವೇಶವಿದೆ ಎಂದು ತಿಳಿದು ಬಂದಿದ್ದು, ಅಲ್ಲಿ ವಿವಾಹ ಕಾರ್ಯ ನೆರವೇರಿಸಿದ್ದರು ಎಂದು ವರದಿ ತಿಳಿಸಿದೆ.
ಆದರೆ ಒಂದು ವರ್ಷದ ಹಿಂದಿನ ಈ ಘಟನೆಯು ಬೇರೆಯೇ ರೀತಿಯ ಶೀರ್ಷಿಕೆಯೊಂದಿಗೆ ಸಾಮಾಜಿಕ ತಾಣದಾದ್ಯಂತ ಶೇರ್ ಆಗುತ್ತಿದೆ.