ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 8ನೇ ಹಾಗೂ ಕೊನೆಯ ಹಂತದ ಮತದಾನಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದ್ದು, ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.
ಹಲವು ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತದಾರ ಈ ಬಾರಿಯೂ ಮಮತಾ ಬ್ಯಾನರ್ಜಿ ಕೈಹಿಡಿಯುವ ಸಾಧ್ಯತೆ ಇದ್ದು, ದೀದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ.
ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲಿ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಗೆಲುವು ಮುನ್ಸೂಚನೆ ನೀಡಿದೆ. ಟಿಎಂಸಿ 152 ರಿಂದ 164 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಬಿಜೆಪಿ 109 ರಿಂದ 121 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್-ಎಡ ಮೈತ್ರಿ 14 ರಿಂದ 25 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆಯ ಪ್ರಕಾರ, 294 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 138-148 ಸ್ಥಾನಗಳನ್ನು ಮತ್ತು ಟಿಎಂಸಿ 128-138 ಸ್ಥಾನಗಳನ್ನು ಗಳಿಸಲಿದೆ.
ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆಯಲ್ಲಿ ಪಕ್ಷಕ್ಕೆ ಟಿಎಂಸಿಗೆ 162 ಮತ್ತು ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆಡಳಿತರೂಢ ಟಿಎಂಸಿ ಸ್ಪಷ್ಟ ಬಹುಮತ ಪಡೆಯಲಿದೆ.
ತಮಿಳುನಾಡು
ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆ ಹಿನ್ನಡೆ ಅನುಭವಿಸಲಿದ್ದು, ಪ್ರತಿಪಕ್ಷ ಡಿಎಂಕೆ ಅಧಿಕಾರಕ್ಕೆ ಬರುವ ಸಾಧತ್ಯೆ ಇದೆ ಎಂದು ಬಹುತೇಕ ಸಮೀಕ್ಷೆ ಹೇಳಿವೆ.
ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 160 ರಿಂದ 170 ಸ್ಥಾನಗಳೊಂದಿಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ.
ಎಐಎಡಿಎಂಕೆ ಮೈತ್ರಿ -58-68
ಡಿಎಂಕೆ ಮೈತ್ರಿ -160-170
ಎಎಂಎಂಕೆ ಮೈತ್ರಿ -4-6
ಪಿ-ಮಾರ್ಕ್ ಸಮೀಕ್ಷೆ ಪ್ರಕಾರ
ಎಐಎಡಿಎಂಕೆ ಮೈತ್ರಿ -40-65
ಡಿಎಂಕೆ ಮೈತ್ರಿ -165-190
ಎಎಂಎಂಕೆ ಮೈತ್ರಿ -1-3
ಕೇರಳ
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಪಿಣರಾಯ್ ವಿಜಯನ್ ನೇತೃತ್ವದ ಎಡರಂಗ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೆ ಬರಲಿದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆದಿದ್ದು, ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
ಎಲ್ ಎಎಫ್: 104-120
ಯುಡಿಎಫ್: 20-36
ಎನ್‌ಡಿಎ: 0-2
ರಿಪಬ್ಲಿಕ್-ಸಿಎನ್‌ಎಕ್ಸ್ ಪ್ರಕಾರ
ಎಲ್ ಡಿಎಫ್: 72-80
ಯುಡಿಎಫ್: 58-64
ಎನ್‌ಡಿಎ: 1-5
ಅಸ್ಸಾಂ
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಅಸ್ಸಾಂ ಒಟ್ಟು 126 ಸ್ಥಾನಗಳಲ್ಲಿ 75-85 ಸ್ಥಾನಗಳನ್ನು ಬಿಜೆಪಿ ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರರು 1-4 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
ಟುಡೇಸ್ ಚಾಣಕ್ಯ ಕೇಸರಿ ಮೈತ್ರಿಕೂಟಕ್ಕೆ 70 ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಕ್ಕೆ 56 ಸ್ಥಾನಗಳನ್ನು ಪಡೆಯಲಿದೆ. ಆದಾಗ್ಯೂ, 'ಪೀಪಲ್ಸ್ ಪಲ್ಸ್' ನಡೆಸಿದ ಪೋಸ್ಟ್ ಪೋಲ್ ಸಮೀಕ್ಷೆಯಂತೆ, ಬಿಜೆಪಿ 43-48 ಸ್ಥಾನಗಳು ಮತ್ತು ಕಾಂಗ್ರೆಸ್ 38-43 ಸ್ಥಾನಗಳನ್ನು ಪಡೆಯಲಿದೆ.
ಪುದುಚೇರಿ ಕೇಂದ್ರಾಡಳಿತ ಪ್ರದೇಶ ಹಾಗೂ ಇತರೆ ನಾಲ್ಕು ರಾಜ್ಯಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.