ನವದೆಹಲಿ: ರಷ್ಯಾದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಸೋಮವಾರ ಅನುಮತಿ ನೀಡಿರುವುದು ತಿಳಿದುಬಂದಿದೆ.
ಲಸಿಕೆ ಕೊರತೆ ಇದೆ ಎಂದು ಕೆಲವು ರಾಜ್ಯಗಳು ಹೇಳಿದ್ದು ಮತ್ತು ಈ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಏಪ್ರಿಲ್ 1ರಂದು ತಜ್ಞರ ಸಭೆ ನಡೆಸಿದ್ದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಒದಗಿಸುವಂತೆ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆಗೆ ಸೂಚಿಸಿತ್ತು. ಗಂಭಿರ ಅಡ್ಡಪರಿಣಾಮಗಳು ಸೇರಿದಂತೆ ಇತರ ಹಲವು ವಿಷಯಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನೂ ಒದಗಿಸಲು ತಿಳಿಸಿತ್ತು ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಶೇಖರಣಾ ವಿಧಾನ, ಸೂಚನೆಗಳು, ಡೋಸ್ ವಿವರ, ವಹಿಸಬೇಕಾದ ಮುನ್ನೆಚ್ಚರಿಕೆಗಳು, ಶೇಖರಣಾ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿವರಗಳನ್ನೂ ಕೋರಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.
ಲಸಿಕೆಯನ್ನು ರಷ್ಯಾದ ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಅಭಿವೃದ್ಧಿಪಡಿಸಿವೆ. ರಷ್ಯಾ, ಭಾರತ ಸೇರಿ ಹಲವು ದೇಶಗಳಲ್ಲಿ ಮನುಷ್ಯನ ಮೇಲೆ ಪ್ರಯೋಗ ನಡೆದಿದೆ. ಭಾರತದಲ್ಲಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ರಷ್ಯಾ ಒಪ್ಪಂದ ಮಾಡಿಕೊಂಡಿತ್ತು.
ಈ ಮಧ್ಯೆ, ದೇಶದಲ್ಲಿ ಕೋವಿಡ್ ಪ್ರರಕಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು ಸತತ ಆರನೇ ದಿನವೂ ಸೋಮವಾರ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ವಿಶ್ವದಲ್ಲೇ ಅತಿಹೆಚ್ಚು ಮಂದಿಗೆ ಸೋಂಕು ತಗುಲಿರುವ ದೇಶಗಳ ಯಾದಿಯಲ್ಲಿ ಭಾರತವೀಗ ಬ್ರೆಜಿಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.