ನವದೆಹಲಿ : ಕರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ, ಕೃಷಿ ಕಾಯ್ದೆಗಳ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಪ್ರತಿಭಟನೆಯನ್ನು ಮುಂದೂಡಿ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಆಗ್ರಹಿಸಿದ್ದಾರೆ.
'ಕೋವಿಡ್ 19 ದೃಷ್ಟಿಯಿಂದ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಮನೆಗೆ ಹಿಂತಿರುಗಲು ಹೇಳಿ ಎಂದು ನಾನು ರೈತ ಸಂಘಟನೆಗಳನ್ನು ಅನೇಕ ಬಾರಿ ಕೇಳಿಕೊಂಡಿದ್ದೆ. ಈಗ ಎರಡನೇ ಅಲೆ ಶುರುವಾಗಿದೆ. ರೈತರು ಮತ್ತು ರೈತ ಸಂಘಟನೆಗಳು ಕೋವಿಡ್ ಪ್ರೊಟೊಕಾಲ್ಅನ್ನು ಪಾಲಿಸಬೇಕು. ಅವರು ಪ್ರತಿಭಟನೆಯನ್ನು ಮುಂದೂಡಿ ನಮ್ಮೊಂದಿಗೆ ಚರ್ಚೆ ನಡೆಸಬೇಕು' ಎಂದು ತೋಮರ್ ಹೇಳಿದ್ದಾರೆ.
'ನಾವು ಸಮಸ್ಯಾತ್ಮಕ ಭಾಗಗಳನ್ನು ಚರ್ಚೆ ಮಾಡಿ ಅದರಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದೆವು. ಆದರೆ ರೈತ ಸಂಘಟನೆಗಳು ಒಪ್ಪಿಕೊಳ್ಳಲಿಲ್ಲ, ಅದಕ್ಕೆ ಕಾರಣವನ್ನೂ ನೀಡಲಿಲ್ಲ. ಸರ್ಕಾರ ಮಾತನಾಡಲು ಸಿದ್ಧವಿಲ್ಲದಿದ್ದಾಗ ಅಥವಾ ಸಂಘಟನೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ಸಿಕ್ಕದಿದ್ದಾಗ ಪ್ರತಿಭಟನೆ ಮುಂದುವರಿಯುತ್ತದೆ. ಇಲ್ಲಿ ಆ ಸನ್ನಿವೇಶ ಇಲ್ಲದಿದ್ದರೂ ಸಂಘಟನೆಗಳು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದವು' ಎಂದು ತೋಮರ್ ಹೇಳಿದ್ದಾರೆ.
ಹಲವು ರೈತ ಸಂಘಟನೆಗಳು, ಆರ್ಥಿಕ ತಜ್ಞರು ನಮ್ಮ ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ ಕೆಲವು ರೈತರು ಅವುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸರ್ಕಾರವು ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳೊಂದಿಗೆ 11 ಸುತ್ತುಗಳ ಮಾತುಕತೆ ನಡೆಸಿತು. ಇನ್ನೂ ಹೆಚ್ಚಿನ ಚರ್ಚೆಗೆ ನಾವು ಸಿದ್ಧರಾಗಿದ್ದೇವೆ ಎಂದು ತೋಮರ್ ಹೇಳಿದ್ದಾರೆ.