ಜೈಪುರ : ಕೃಷಿ ಕಾಯ್ದೆಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ಸಮಾವೇಶಗಳನ್ನು ನಡೆಸುತ್ತಿರುವ ಭಾರತಿಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಬೆಂಗಾವಲಿನ ಮೇಲೆ ರಾಜಸ್ಥಾನದ ಅಲ್ವಾರ್‌ನಲ್ಲಿ ಶುಕ್ರವಾರ ದಾಳಿ ನಡೆದಿದೆ. ಟಿಕಾಯತ್ ಅವರ ಬೆಂಗಾವಲು ವಾಹನದ ಹಿಂಬದಿಯ ಗಾಜನ್ನು ಪುಡಿ ಮಾಡಲಾಗಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಾತಾರ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾಕೇಶ್ ಟಿಕಾಯತ್ ಅವರ ಬೆಂಗಾವಲು ವಾಹನವು ಅಲ್ವಾರ್‌ನ ಹರ್ಸೋರಾ ಗ್ರಾಮದಿಂದ ಬನ್ಸೂರ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ. ಹರ್ಸೋರಾದಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಟಿಕಾಯತ್ ಅವರು ಬನ್ಸೂರ್‌ನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.
ಟಿಕಾಯತ್ ಅವರು ಹಾನಿಗೊಳಗಾದ ಕಾರಿನ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ಗೂಂಡಾಗಳು ಈ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
'ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ರಸ್ತೆಯ ತಾತಾರ್ಪುರ ಪ್ರದೇಶದಲ್ಲಿ ಬಿಜೆಪಿ ಗೂಂಡಾಗಳಿಂದ ದಾಳಿ ನಡೆದಿದೆ. ಪ್ರಜಾಪ್ರಭುತ್ವದ ಕಗ್ಗೊಲೆ' ಎಂದು ಟಿಕಾಯತ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ನಾಲ್ಕು ತಿಂಗಳಿನಿಂದ ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಟಿಕಾಯತ್ ವಹಿಸಿದ್ದಾರೆ. ರಾಜಧಾನಿ ಸುತ್ತಲಿನ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಕಡಿಮೆಯಾಗಿದ್ದರೂ, ರಾಕೇಶ್ ಟಿಕಾಯತ್ ಮತ್ತು ಅವರ ಬೆಂಬಲಿಗರು ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ರೈತರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ 'ಮಹಾಪಂಚಾಯತ್' ಸಭೆ ನಡೆಸಿರುವ ಅವರು, ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ತೀವ್ರಗೊಳಿಸಲು ರೈತರು ಒಂದುಗೂಡುವಂತೆ ಕರೆ ನೀಡುತ್ತಿದ್ದಾರೆ.