ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ (73) ಬೆಂಗಳುರಿನಲ್ಲಿ ನಿಧನರಾದರು.
ಹೆಗಡೆಯವರಿಗೆ ಏಪ್ರಿಲ್ 13ರಂದು ಕೊರೋನಾ ದೃಢವಾಗಿತ್ತು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರಿದ್ದಾರೆ.
ಯಕ್ಷಗಾನದ ಅರ್ಥಧಾರಿ, ಪ್ರಸಂಗಕರ್ತರೂ ಆಗಿದ್ದ ಹೆಗಡೆ ಎರಡನೇ ಅವಧಿಗೆ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಇವರು ಯಕ್ಷಗಾನ ಕಲಾವಿದರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಹೆಗಡೆ ಅವರ ನಿಧನಕ್ಕೆ ಕನ್ನಡ ಹಾಗೂ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ,
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಹಿರಿಯ ವಿದ್ವಾಂಸರಾದ ಪ್ರೊಫೆಸರ್ ಎಂ. ಎ. ಹೆಗಡೆ ಅವರು ನಿಧನರಾದ ಸುದ್ದಿ ತಿಳಿದು ಆಘಾತವಾಗಿದೆ. ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಪ್ರೊ. ಎಂ. ಎ. ಹೆಗಡೆ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಟಕರ.
"ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು, ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು, ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
"ಸರಳ ಹಾಗೂ ನೇರ ನಡವಳಿಕೆಗೆ ಹೆಸರಾಗಿದ್ದ ಅವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.