ಕೃಷಿ-ಖುಷಿಯ ಸಮೃದ್ದಿಯ ನೆನಪುಗಳನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ, ಕನಸುಗಳೊಂದಿಗೆ ಇಂದು ವಿಷು ಆಚರಣೆಗೊಳ್ಳುತ್ತದೆ. ತುಳುನಾಡಿನಲ್ಲಿ ಅತೀ ಹೆಚ್ಚು ಮಹತ್ವಿಕೆ ಇರುವ ವಿಷು(ಬಿಸು) ಆಚರಣೆ ಇಂದೀಗ ಕಳವಳಕಾರಿಯಾದ ಅವಸ್ಥೆಯ ವ್ಯವಸ್ಥೆಗಳ ಸುಳಿಯಲ್ಲಿ ಕೊರೊನಾ ಮಹಾಮಾರಿಯನ್ನು ಗೆಲ್ಲುವ ಶಕ್ತಿಯಾಗಿ ಮೈದಳೆಯಬೇಕು.
ಕಳೆದ ಬಾರಿಯೂ ಈ ಬಾರಿ ವಿಷು ಸಂಕಟಕರವಾದ ದಿನಗಳಿಂದ ಆಚರಿಸಲ್ಪಟ್ಟಿರುವುದು ಮನುಕುಲದ ದೌರ್ಭಾಗ್ಯವೆನ್ನದೆ ವಿಧಿಯಿಲ್ಲ. ಹೊಂಬಣ್ಣದಿಂದ ಅರಳಿ ನಗುವ ಕೊನ್ನೆ ಹೂ ಬಹುಷಃ ಮಾನವ ಕುಲದ ಜಟಿಲತೆಯನ್ನು ನೋಡಿ ಮರುಗಿರಬೇಕು. ಅದು ಈ ಬಾರಿ ಹಿಂದಿನಷ್ಟು ಹೊಳಪಿಂದ ಕಂಗೊಳಿಸುತ್ತಿಲ್ಲವೆಂದೇ ಕಾಣಿಸುತ್ತಿದೆ. ಅಥವಾ ನಮ್ಮ ಭಾವದ ಕಣ್ಣುಗಳಿಗೆ ಹಾಗೆನಿಸಿರಲೂ ಬಹುದು!
ಕೃಷ್ಣನ ವಿಗ್ರಹದ ಮುಂದೆ. ಪೂರ್ಣ ಕೊನ್ನೆ ಗೊಂಚಲು ಸಮೃದ್ಧಿಯ ಪ್ರದರ್ಶನವಾಗಿ ಕನಸುಗಳನ್ನು ಮತ್ತೆ ಮತ್ತೆ ಬಿತ್ತಬೇಕಿದೆ ಈಗ. ಅಂದು ಪಾರ್ಥನಿಗೆ ಯುದ್ದೂಮಿಯಲ್ಲಿ ಬೆಳಕು ತೋರಿದಂತೆ ಮೌಢ್ಯ ಕಳೆಯಲು ಪಾಂಚಜನ್ಯ ಮೊಳಗಬೇಕು.
ಈ ಪವಿತ್ರತೆಯ ದಿನವು ಯಾವುದೇ ಪ್ರತಿಕೂಲತೆಯನ್ನು ನಿವಾರಿಸುವ ಆತ್ಮದ ಶಕ್ತಿಗೆ ಸಾಕ್ಷಿಯಾಗಿದೆ. ಬಿಕ್ಕಟ್ಟುಗಳಲ್ಲಿ ನಿರುತ್ಸಾಹಗೊಳ್ಳದೆ ಭರವಸೆಯ ಬೆಳಕಿಂದ ಎಲ್ಲವೂ ಚೆನ್ನಾಗಿರುವ ದಿನವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಕೊರೋನಾ ಜೊತೆಗೆ ಬದುಕುತ್ತೇವೆ ಎಂಬ ಭರವಸೆಯಲ್ಲಿ.
ಪ್ರಪಂಚದಾದ್ಯಂತದ ಜೀವಕೋಟಿಗಳಿಗೆ ಸಮೃದ್ಧ, ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯವನ್ನು ನಾವು ಬಯಸುತ್ತೇವೆ. ಸಮರಸ ಸುದ್ದಿ ತಂಡದಿಂದ ಹೃತ್ಪೂರ್ವಕ ವಿಷು ಶುಭಾಶಯಗಳು.