ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಹೀಗೆ ಮಾಡುವುದು ಸುರಕ್ಷಿತ ಎಂದು ಹೇಳಿದೆ.
ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ಉತ್ತಮ ಎಂದು ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಆರೋಗ್ಯ ಇಲಾಖೆ, ಭಾರತವನ್ನು ಬಿಟ್ಟು ಬರಲು ಇಚ್ಛಿಸುವ ನಾಗರಿಕರು ಈಗಿರುವ ವಾಣಿಜ್ಯ ಸಾರಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಭಾರತದಿಂದ ಅಮೆರಿಕಕ್ಕೆ ದಿನನಿತ್ಯ ನೇರ ವಿಮಾನವಿದೆ. ಪ್ಯಾರಿಸ್ ಹಾಗೂ ಫ್ರಾಂಕ್‌ಫರ್ಟ್‌ನಿಂದ ಆಗಮಿಸುವ ವಿಮಾನಗಳೂ ಲಭ್ಯವಿವೆ ಎಂದು ತಿಳಿಸಿದೆ.
ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಹಲವೆಡೆ ಪರೀಕ್ಷಾ ಮಟ್ಟವೂ ಕುಸಿದಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ, ಹಾಸಿಗೆ, ಔಷಧಗಳ ಕೊರತೆ ಅಧಿಕವಾಗಿದೆ ಎಂದು ಅಮೆರಿಕ ರಾಯಭಾರಿ ಎಚ್ಚರಿಕೆ ನೀಡಿದೆ.
ಹಲವು ರಾಷ್ಟ್ರಗಳು ಈಗಾಗಲೇ ಭಾರತದ ವಿಮಾನ ಸಂಪರ್ಕವನ್ನು ಕಡಿತಗೊಳಿಸಿವೆ.
ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದ್ದು, ಗುರುವಾರ 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ.