ನವದೆಹಲಿ: ದೇಶದಲ್ಲಿ ಕೊರೋನಾದ ಎರಡನೇ ಅಲೆ ಎದ್ದು ಹೆಚ್ಚಾಗುತ್ತಿರುವ ಸೋಂಕಿನ ಮಧ್ಯೆ ಕೋವಿಡ್-19 ಪರಿಸ್ಥಿತಿ ಮತ್ತು ಲಸಿಕೆ ಅಭಿಯಾನದ ಕುರಿತು ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ದೆಹಲಿಯಲ್ಲಿ ನಡೆಯುತ್ತಿದೆ.
ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಸಂಪುಟ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳು, ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ಸಭೆಯಲ್ಲಿ ಹಾಜರಿದ್ದಾರೆ.
ಇಂದು ದೇಶದಲ್ಲಿ 93 ಸಾವಿರದ 249 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು ಈ ವರ್ಷದಲ್ಲಿಯೇ ಇದುವರೆಗೆ ಕಂಡುಬಂದ ಕೇಸ್ ಗಳಲ್ಲಿ ಅಧಿಕವಾಗಿದೆ. ಈ ಮೂಲಕ ಒಟ್ಟು 1 ಕೋಟಿಯ 24 ಲಕ್ಷದ 85 ಸಾವಿರದ 509 ಕೇಸುಗಳು ವರದಿಯಾಗಿವೆ. ಕಳೆದ ವರ್ಷ ಸೆಪ್ಟೆಂಬರ್ 19ರ ನಂತರ ಇಂದು ದೇಶದಲ್ಲಿ ಇಷ್ಟೊಂದು ಕೊರೋನಾ ಪ್ರಕರಣ ವರದಿಯಾಗಿದೆ. ಅಂದು ದೇಶದಲ್ಲಿ 93 ಸಾವಿರದ 337 ಹೊಸ ಪ್ರಕರಣ ವರದಿಯಾಗಿದ್ದವು.
ಈ ಮೂಲಕ ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ 64 ಸಾವಿರದ 623ಕ್ಕೆ ಏರಿಕೆಯಾಗಿದ್ದು 513 ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ತೋರಿಸಿದ ಅಂಕಿಅಂಶದಲ್ಲಿ ಹೇಳಿದೆ.
ಸತತ 25 ನೇ ದಿನದಿಂದ ಕೊರೋನಾ ಸೋಂಕು ಹೆಚ್ಚುತ್ತಾ ಹೋಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,91,597 ಕ್ಕೆ ಏರಿ ಒಟ್ಟು ಸೋಂಕಿತರ ಪ್ರಮಾಣ ಶೇಕಡಾ 5.54 ರಷ್ಟಿದೆ. ಚೇತರಿಕೆ ಪ್ರಮಾಣವು ಇನ್ನೂ ಶೇಕಡಾ 93.14 ಕ್ಕೆ ಇಳಿದಿದೆ ಎಂದು ಅಂಕಿಅಂಶ ತಿಳಿಸಿದೆ.
ಕಳೆದ ಫೆಬ್ರವರಿ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1,35,926 ಕ್ಕೆ ಇಳಿದಿತ್ತು, ಇದು ಒಟ್ಟು ಸೋಂಕುಗಳಲ್ಲಿ ಶೇಕಡಾ 1.25 ರಷ್ಟಿತ್ತು.