ಮುಂಬೈ: ಮಹಾರಾಷ್ಟ್ರದಲ್ಲಿ ಮ್ಯಾಟ್ರೆಸ್(ಹಾಸಿಗೆ) ತಯಾರಿಸುವ ಕಾರ್ಖಾನೆಯೊಂದು ತನ್ನ ಉತ್ಪನ್ನಗಳಿಗೆ ಸ್ಟಫ್ ಮಾಡಲು ಹತ್ತಿ ಅಥವಾ ಇತರ ಕಚ್ಚಾವಸ್ತುಗಳ ಬದಲಿಗೆ ಉಪಯೋಗಿಸಿ ಎಸೆದಿರುವ ಮಾಸ್ಕ್ಗಳನ್ನು ಬಳಸುತ್ತಿದ್ದುದು ಪೊಲೀಸರ ಗಮನಕ್ಕೆ ಬಂದಿದೆ. ಘಟಕದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಕಾರ್ಖಾನೆಯ ಆವರಣದಲ್ಲಿ ಕಂಡುಬಂದ ಮಾಸ್ಕ್ಗಳ ರಾಶಿಯನ್ನು ಬೆಂಕಿಹಚ್ಚಿ ನಾಶಪಡಿಸಿದ್ದಾರೆ.
'ಜಲಗಾವ್ನ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೆರೇಷನ್(ಎಂಐಡಿಸಿ) ಪೊಲೀಸ್ ಠಾಣೆಗೆ ಮಹಾರಾಷ್ಟ್ರ ಮ್ಯಾಟ್ರೆಸ್ ಸೆಂಟರ್ ಎಂಬಲ್ಲಿ ಬಳಸಿದ ಮಾಸ್ಕ್ಗಳನ್ನು ಹಾಸಿಗೆ ತಯಾರಿಸಲು ಬಳಸಲಾಗುತ್ತಿದೆ ಎಂಬ ಮಾಹಿತಿ ಬಂತು. ಅಧಿಕಾರಿಗಳು ಕುಸುಂಬಾ ಗ್ರಾಮದಲ್ಲಿರುವ ಕಾರ್ಖಾನೆಯ ಆವರಣಕ್ಕೆ ಭೇಟಿ ನೀಡಿದಾಗ, ಬಳಸಿದ ಮಾಸ್ಕ್ಗಳನ್ನು ಹಾಸಿಗೆಯೊಂದಕ್ಕೆ ತುಂಬುತ್ತಿರುವುದನ್ನು ಕಂಡರು' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗವಾಲಿ ಹೇಳಿದ್ದಾರೆ.
ಕಾರ್ಖಾನೆಯ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ದಂಧೆಯಲ್ಲಿ ಇನ್ನೂ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟಕದ ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಬಳಸಿದ ಮಾಸ್ಕ್ಗಳನ್ನು ನಿಯಮಾನುಸಾರ ಬೆಂಕಿಹಚ್ಚಿ ನಾಶ ಮಾಡಲಾಗಿದೆ ಎಂದು ಗವಾಲಿ ತಿಳಿಸಿದ್ದಾರೆ.
ತ್ಯಾಜ್ಯ ಸಮಸ್ಯೆ : ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಉತ್ಪಾದನೆ ಹೆಚ್ಚಿರುವಂತೆಯೇ ಬಳಸಿದ ಮಾಸ್ಕ್ಗಳನ್ನು ವಿಲೇವಾರಿ ಮಾಡುವ ಸಮಸ್ಯೆಯೂ ಹೆಚ್ಚಿದೆ. ಅದಾಗಲೇ ಹೆಚ್ಚು ಒತ್ತಡದಲ್ಲಿರುವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಮೇಲೆ ಈಗ ಟನ್ಗಟ್ಟಲೆ ಬಯೋಮೆಡಿಕಲ್ ವೇಸ್ಟ್ಅನ್ನು ನಿರ್ವಹಿಸುವ ಹೊರೆ ಬಿದ್ದಿದೆ. 2020ರ ಜೂನ್ನಿಂದ ಸೆಪ್ಟೆಂಬರ್ವರೆಗೆ ಗ್ಲೌಸ್ ಮತ್ತು ಮಾಸ್ಕ್ಗಳನ್ನು ಒಳಗೊಂಡ 18,000 ಟನ್ ಕರೊನಾ ಉತ್ತೇಜಿತ ತ್ಯಾಜ್ಯವನ್ನು ಸಂಗ್ರಹಿಸಲಾಯಿತು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತಿಳಿಸಿವೆ.