ಕಾಸರಗೋಡು: ಕೋವಿಡ್-19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಗೆ ತಂದಿರುವ ಎರಡು ದಿವಸಗಳ ನಿಯಂತ್ರಣ ಕ್ರಮ ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಯಶಸ್ವಿಯಾಗಿದೆ. ಕಡ್ಡಾಯ ನಿಯಂತ್ರಣ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದಲೂ ಉತ್ತಮ ಸಹಕಾರ ಮೂಡಿಬಂದಿತ್ತು. ತುರ್ತು ಕಾರ್ಯಗಳಿಗಾಗಿ ಸಂಚರಿಸುವವರಿಗೆ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‍ಗಳು ಓಡಾಟ ನಡೆಸಿದ್ದರೂ, ಬೆರಳೆಣಿಕೆ ಮಂದಿಯೊಂದಿಗೆ ಮಾತ್ರ ಸಂಚರಿಸಬೇಕಾಯಿತು.
ಇದರಿಂದ ಕೆಲವು ಬಸ್‍ಗಳು ಅರ್ಧಕ್ಕೆ ಸಂಚಾರ ಸ್ಥಗಿತಗೊಳಿಸಿದೆ. ಕಾಸರಗೋಡಿನಿಂದ ಕಣ್ಣೂರು, ಮಂಗಳೂರು, ಸುಳ್ಯ, ಪುತ್ತೂರು ಹಾಗೂ ಬಂದಡ್ಕ ಭಾಗಕ್ಕೆ ಕೆಲವು ಕೆಎಸ್ಸಾರ್ಟಿಸಿ ಬಸ್‍ಗಳು ಸಂಚಾರ ನಡೆಸಿತ್ತು. ಜನಸಂಚಾರವಿಲ್ಲದೆ ಕಾಸರಗೋಡು ನಗರ ಬಿಕೋ ಎನ್ನುತ್ತಿತ್ತು. ಮೆಡಿಕಲ್, ದಿನಸಿ, ತರಕಾರಿ ಸೇರಿದಂತೆ ಕೆಲವೊಂದು ಅಂಗಡಿಗಳು ತೆರೆದು ಕಾರ್ಯಾಚರಿಸಿತ್ತು. ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ತುರ್ತು ಸೇವೆ ಹೊರತುಪಡಿಸಿ ಭಾನುವಾರ ಅಘೋಷಿತ ಬಂದ್ ನಡೆಯುತ್ತಿದ್ದು, ಈ ಬಾರಿ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿರುವುದರಿಂದ ಮತ್ತಷ್ಟು ಯಶಸ್ವಿಯಾಗುವ ಸಾಧ್ಯತೆಯಿದೆ.
ಅನಿವಾರ್ಯ ಮತ್ತು ತುರ್ತುಸೇವೆಗಳಿಗೆ ಮಾತ್ರ ಅನುಮತಿಯಿರುವುದಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿರುವ ಆದೇಶದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು, ಸಾರ್ವಜನಿಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಇತ್ಯಾದಿಗಳಿಗೆ ಶನಿವಾರ ರಜೆ ಸಾರಲಾಗಿತ್ತು.
ಕಾಸರಗೋಡು ಜಿಲ್ಲೆಯ ಪ್ರಧಾನ ನಗರಗಳಿಗೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಿರುವುದರ ಬಗ್ಗೆ ಅಂತಿಮ ತೀರ್ಮಾನ ಏ. 26ರಂದು ಕೈಗೊಳ್ಳಲಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ.