ತಿರುವನಂತಪುರಂ : ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಮಯನ್ಮಾರ್‌ನಲ್ಲಿ ಸೇನೆಯು ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಅಟ್ಟುತ್ತಿರುವ ಘಟನೆಯನ್ನು ಉಲ್ಲೇಖಿಸಿರುವ ವಿಜಯನ್, ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿರುವ ಬಂಧನ ಕೇಂದ್ರಗಳು ಕೆಲವರನ್ನು ಮಾತ್ರ ಬಂಧಿಸಿಡಲು ನಿರ್ಮಿಸಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಬೇಡ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಅಲ್ಲಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
'ಸಿಎಎ-ಎನ್‌ಆರ್‌ಸಿ ಬಂಧನ ಶಿಬಿರಗಳು ಕೆಲವೇ ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗಿವೆ ಎಂಬ ತಪ್ಪು ಅಭಿಪ್ರಾಯಕ್ಕೆ ಒಳಗಾಗಬೇಡಿ. ನಮ್ಮ ಮುಂದೆ ಮಯನ್ಮಾರ್ ಉದಾಹರಣೆ ಇದೆ. ಆಡಳಿತ ವ್ಯವಸ್ಥೆಯಲ್ಲಿ ಆದ್ಯತೆ ಪಡೆಯದವರನ್ನು ಅದರಲ್ಲಿ ಹಾಕುತ್ತಾರೆ. ಫ್ಯಾಸಿಸಂ ಕೆಲಸ ಮಾಡುವುದೇ ಹೀಗೆ. ಜಾತ್ಯತೀತವು ಇದರಲ್ಲಿ ರಾಜಿಯಾಗಬಾರದು' ಎಂದು ಪಿಣರಾಯಿ ಹೇಳಿದ್ದಾರೆ.
'ನಾವು ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಅದರ ಬಗ್ಗೆ ಚಿಂತೆಗೊಳಗಾಗುವ ಅವಶ್ಯಕತೆ ಇಲ್ಲ' ಎಂದು ಮಲಪ್ಪುರಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಯೋಜಿಸಿದ್ದ ಚುನಾವಣಾ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಅಸ್ಸಾಂನಲ್ಲಿ ಎರಡು ದಿನಗಳ ಹಿಂದೆ ವಿಧಾನಸಭೆ ಚುನಾವಣೆ ಪ್ರಚಾರ ನಡೆಸುವ ಸಂದರ್ಭದಲ್ಲಿಯೂ ರಾಹುಲ್ ಗಾಂಧಿ ಇದೇ ಹೇಳಿಕೆ ನೀಡಿದ್ದರು.