ಕಾಸರಗೋಡು: ಕಾಸರಗೋಡಿನ ಒಟ್ಟು ಆದಾಯದ ಬಹುಪಾಲು ವಿದೇಶಿ ವ್ಯವಹಾರವಾಗಿದ್ದು, ಜಿಲ್ಲೆಯ 40 ಶೇ.ಕ್ಕಿಂತಲೂ ಮಿಕ್ಕಿದ ಕುಟುಂಬಗಳ ಜೀವನ ಮಾರ್ಗ ವಿದೇಶ ಉದ್ಯೋಗದಿಂದಾಗಿದೆ. ಆದರೆ ಕೋವಿಡ್ ಎರಡನೇ ಅಲೆ ಉದ್ಯೋಗ ಅರಸಿ ವಿದೇಶದತ್ತ ಮುಖ ಮಾಡಿರುವ ಕಾಸರಗೋಡಿನ ಜನತೆಗೆ ಹೊಡೆತ ನೀಡಿದೆ. ಕೋವಿಡ್ ತಪಾಸಣಾ ಪ್ರಮಾಣಪತ್ರದೊಂದಿಗೆ ವಿಮಾನ ಟಿಕೆಟ್ ಪಕ್ಕಾ ಮಾಡಿಟ್ಟು ವಿದೇಶ ಪ್ರಯಾಣಕ್ಕೆ ಕಾದುಕುಳಿತಿದ್ದ ಹಲವಾರು ಮಂದಿಯ ಉದ್ಯೋಗಕ್ಕೆ ಸಂಚಕಾರ ಒದಗಿಬಂದಿದೆ. ಕೋವಿಡ್ ಅಲೆ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಭಾರತದ ಪ್ರಜೆಗಳ ಭೇಟಿಗೆ ನಿಯಂತ್ರಣ ಏರ್ಪಡಿಸಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಹತ್ತು ದಿವಸಗಳ ವರೆಗೆ ಈ ನಿಯಂತ್ರಣ ಜಾರಿಯಲ್ಲಿರುವುದಾಗಿ ಘೋಷಿಸಿದ್ದರೂ, ಇದು ಮತ್ತಷ್ಟು ದಿವಸಗಳಿಗೆ ವಿಸ್ತರಣೆಗೊಳ್ಳುವ ಸಾಧ್ಯತೆಯಿದೆ. ಎರಡನೇ ಹಂತದ ಕರೊನಾ ಏಕಾಏಕಿ ಆಗಮಿಸಿರುವುದರಿಂದ ವಿದೇಶದಲ್ಲಿ ಉದ್ಯೋಗದ ಕನಸು ಹೊತ್ತ ಕಾಸರಗೋಡು ಜಿಲ್ಲೆಯ ನೂರಾರು ಮಂದಿಗೆ ಆತಂಕ ಎದುರಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹಲವಾರು ಮಂದಿ ಊರಿಗೆ ಆಗಮಿಸಿ, ರಜೆ ಮುಗಿಸಿ ವಿದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸುತ್ತಿರುವ ಮಧ್ಯೆ ಹೊರಬಿದ್ದಿರುವ ಆದೇಶದಿಂದ ಇವರ ಕೆಲಸಕ್ಕೂ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ.
ಕೆಲಸ ಕಳೆದುಕೊಳ್ಳುವ ಭೀತಿ:
ವಿದೇಶದಲ್ಲಿರುವ ಕೆಲವೊಂದು ಕಂಪೆನಿಗಳು ಕಾರ್ಮಿಕರ ಸಂಖ್ಯೆ ಕಡಿತಗೊಳಿಸಲು ಯತ್ನ ನಡೆಸುತ್ತಿರುವ ಮಧ್ಯೆ ಇಂತಹ ಸಂದಿಗ್ಧ ಪರಿಸ್ಥಿತಿಯ ಲಾಭ ಪಡೆದು ಇವರನ್ನು ಕೆಲಸದಿಂದ ಕಿತ್ತುಹಾಕಲೂ ಸಂಚು ನಡೆಸುತ್ತಿರುವುದಾಗಿ ಮಾಹಿತಿಯಿದೆ. ಹೊಸದಾಗಿ ಕೆಲಸ ಅರಸಿ ತೆರಳುವವರಿಗೆ ಹಾಗೂ ಈಗಾಗಲೇ ಕೆಲಸ ನಡೆಸುವವರಿಗೂ ಕೋವಿಡ್ ನಿಯಂತ್ರಣ ಸಂಚಕಾರ ತಂದೊಡ್ಡಿದೆ. ವಿಮಾನ ಸಂಚಾರ ರದ್ದಾದ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್‍ನ ಹಣ ವಾಪಸಾಗುವ ಬಗ್ಗೆಯೂ ಕೆಲವರಲ್ಲಿ ಸಂಶಯವಿದೆ. ಈಗಾಗಲೇ ವಿಮಾನ ರದ್ದುಗೊಂಡಿರುವುದರಿಂದ ವಿದೇಶದಲ್ಲಿ ಕೆಲಸ ಹೊಂದಿರುವವರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.