ಮಂಜೇಶ್ವರ: ಸ್ಥಳೀಯ ವ್ಯಾಪಾರಿಯೊಬ್ಬರು ಹುಟ್ಟಿ ಬೆಳೆದಿರುವ ಮನೆಯನ್ನು ಕೆಡವಲು ಮನಸ್ಸೊಪ್ಪದ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಜ್ಯಾಕ್ ಅಳವಡಿಸಿ ಮನೆಯನ್ನು 40 ಫೀಟ್ ಮುಂಬಾಗಕ್ಕೆ ತರುತ್ತಿರುವ ದೃಶ್ಯ ಇದೀಗ ಸ್ಥಳೀಯರಿಗೆ ಬೆರಗನ್ನು ನೀಡುವುದರೊಂದಿಗೆ ಕಾಮಗಾರಿ ವೈರಲಾಗುತ್ತಿದೆ.
ವಾಹನಗಳಿಗೆ ಜ್ಯಾಕ್ ಹಾಕಿ ಮೇಲೆತ್ತುವುದು ಸರ್ವೇ ಸಾಮಾನ್ಯವಾಗಿದ್ದರೂ ಆದರೆ ಎರಡಂತಸ್ಥಿನ 4000 ಚದರ ಫೀಟ್ ವಿಸ್ತೀರ್ಣವಿರುವ ಮನೆಯನ್ನು ಮೇಲಕ್ಕೆತುವುದರ ಜೊತೆಯಾಗಿ ಅದನ್ನು 40 ಚದರ ಫೀಟ್ ಮುಂದಕ್ಕೆ ಕೊಂಡೊಯ್ಯುತ್ತಿರುವುದು ನೋಡುಗರಿಗೆ ಕುತೂಹಲವನ್ನು ಸೃಷ್ಟಿಸಿದೆ. ಹುಟ್ಟಿ ಬೆಳೆದ ಮನೆಯನ್ನು ಕೆಡವದೆ ನೂತನ ಮಾದರಿಯಲ್ಲಿ ಸ್ಥಳ ಮಾರ್ಪಾಟುಗೊಳಿಸಿ ಹೇಗೆ ಸಂರಕ್ಷಿಸಬೇಕೆಂಬುದರ ಬಗ್ಗೆ ಆಲೋಚಿಸುತ್ತಿರುವ ಮಧ್ಯೆ ಇಂತದೊಂದು ಹೊಸ ತಂತ್ರಜ್ಞಾನ ಮನೆ ಮಾಲಕರ ಗಮನಕ್ಕೆ ಬಂದಿದೆ.
ಮಂಜೇಶ್ವರ ಕುನ್ನಿಲ್ ಜುಮಾ ಮಸೀದಿಯ ಪಕ್ಕದಲ್ಲಿರುವ ಯು ಎಸ್ ಅಹ್ಮದ್ ಭಾವ ಹಾಜಿಯವರ ಹಳೆಯದಾದ ಮನೆಯನ್ನು ಇದೀಗ ಉತ್ತರ ಭಾರತದಿಂದ ಆಗಮಿಸಿದ ಸುಮಾರು 20 ಮಂದಿ ಕಾರ್ಮಿಕರು ನೂತನ ತಂತ್ರಜ್ಞಾನದೊಂದಿಗೆ ಸಿದ್ದಪಡಿಸಲು ಪಣತೊಟ್ಟದ್ದಾರೆ.
ನಾಲ್ಕು ತಿಂಗಳಿನಲ್ಲಿ ಎರಡಂತಸ್ಥಿನ ಮನೆಯನ್ನು ಕಂದಕ ಕೊರೆದು ಮೇಲಕ್ಕೆ ಎತ್ತಿ ಅಲ್ಪ ಮುಂದಕ್ಕೆ ತಂದು ನಿಲ್ಲಿಸುವ ಕರಾರನ್ನ ನೀಡಲಾಗಿದೆ. ಇದಕ್ಕೆ ಸುಮಾರು 70 ಲಕ್ಷ ರೂ. ತಗಲಬಹುದಾಗಿ ಅಂದಾಜಿಸಲಾಗಿದೆ. ಕೇರಳದಲ್ಲಿ ಪ್ರಳಯಬಂದ ಬಳಿಕ ಮನೆಗಳನ್ನು ಇಂತಹ ತಂತ್ರಜ್ಞಾನ ಬಳಸುವುದು ಭಾರೀ ಪ್ರಚಾರವನ್ನು ಗಿಟ್ಟಿಸಿದ್ದರೂ ಇಡಿಗ ಕಾಸರಗೋಡು ಜಿಲ್ಲೆಯಲ್ಲಿ ಇದು ಮೊತ್ತ ಮೊದಲ ಪ್ರಯತ್ನವಾಗಿದೆ. ಮನೆಯನ್ನು ಮೇಲಕ್ಕೆತ್ತಲು ಚದರ ಫೀಟ್ ಗೆ 250 ರೂ. ಹಾಗೂ ಹಾಗೂ ಬಳಿಕ ಅದನ್ನು ಫಿಕ್ಸ್ ಮಾಡಲು ಚದರ ಫೀಟ್ ಗೆ 250 ರೂ. ನಂತೆ ಕರಾರು ನೀಡಲಾಗಿದೆ. ಮನೆಯ ಕೆಲ ಭಾಗದ ಸುತ್ತಲೂ ಜ್ಯಾಕ್ ಗಳನ್ನು ಅಳವಡಿಸಿ ಅದನ್ನು ಮೇಲಕ್ಕೆತ್ತಲಾಗುತ್ತಿದೆ.